ಕಾಸರಗೋಡು: ಹಸಿರು ಕ್ಯಾಂಪಸ್ ಯೋಜನೆಯನ್ವಯ 'ಒಂದು ಮರ ದತ್ತು ತೆಗೆದುಕೊಳ್ಳೋಣ'ಯೋಜನೆ ಜಾರಿಗೆ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಪೆರಿಯ ಕ್ಯಾಂಪಸ್‍ನಲ್ಲಿ ಚಾಲನೆ ನೀಡಲಾಯಿತು. ಯೋಜನೆಯನ್ವಯ ಕೇಂದ್ರೀಯ ವಿಶ್ವ ವಿದ್ಯಾಲಯದ ಶಿಕ್ಷಕರು, ಸಿಬ್ಬಂದಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸಸಿಗಳನ್ನು ದತ್ತು ಪಡೆದು ಪೋಷಿಸುವ ಜವಾಬ್ದಾರಿ ವಹಿಸಿಕೊಮಡರು. ದತ್ತು ಪಡೆದು ಪೋಷಿಸುವವರ ಹೆಸರಿನ ಫಲಕವನ್ನು ಆಯಾ ಸಸಿಗಳಲ್ಲಿ ತೂಗುಹಾಕಲಾಗುವುದು. ಈ ಮೂಲಕ ಕ್ಯಾಂಪಸ್ ವಠಾರದಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟುಬೆಳೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಸೌಂದರ್ಯ ವೃಕ್ಷಗಳು, ಹಣ್ಣು, ನೆರಳು ನೀಡುವ ಮರಗಳನ್ನು ನೆಟ್ಟುಬೆಳೆಸಲಾಗುತ್ತಿದೆ.
ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ವೆಂಕಟೇಶ್ವರಲು ನಿರ್ದೇಶಪ್ರಕಾರ ಕ್ಯಾಂಪಸ್ ಡೆವೆಲಪ್‍ಮೆಂಟ್ ಸಮಿತಿ ಯೋಜನೆ ಜಾರಿಗೊಳಿಸಲಿದೆ. ಸಮಿತಿ ಸದಸ್ಯ ಡಾ. ಜಿನ್ನಿ ಆಂಟನಿ ಯೋಜನೆ ಕೋರ್ಡಿನೇಟರ್ ಆಗಿ ಸಹಕರಿಸಲಿದ್ದಾರೆ. ಕ್ಯಾಂಪಸ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ. ವೆಂಕಟೇಶ್ವರಲು ಸಸಿ ನೆಡುವ ಮೂಲಕ ಯೋಜನೆ ಉದ್ಘಾಟಿಸಿದರು. ಕ್ಯಾಂಪಸ್ ವಠಾರದಲ್ಲಿ ಅರ್ಧ ಲಕ್ಷ ಸಸಿಗಳನ್ನು ನೆಟ್ಟುಬೆಳೆಸುವ ಮಿನಿ ಫಾರೆಸ್ಟ್ ಯೋಜನೆಯೂ ಮುಂದಿನ ದಿನಗಳಲ್ಲಿ ಜಾರಿಯಾಗಲಿರುವುದಾಗಿ ವಿವಿ ಪ್ರಕಟಣೆ ತಿಳಿಸಿದೆ.





