ಕಾಸರಗೋಡು: ಬಿಡುಸಿನ ಮಳೆಯ ಪರಿಣಾಮ ಡೆಂಗೆ, ಇಲಿಜ್ವರ ಸಹಿತ ಅಂಟುರೋಗಗಳು ಹರಡುವ ಸಾಧ್ಯತೆಗಳಿದ್ದು, ಅವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಂದು ವಾರದ ಅವಧಿಯಲ್ಲಿ ವಾರ್ಡ್ ಮಟ್ಟದ ಶುಚಿತ್ವ ಸಮಿತಿಗಳ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ಅಂಟುರೋಗ ನಿಯಂತ್ರಣ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯಾಡಳಿತೆ ಸಂಸ್ಥೆಗಳಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಮುಂದಿನ ಸಭೆ ನಡೆಸಲೂ ನಿರ್ಧರಿಸಲಾಗಿದೆ. ಮಹಾತ್ಮಾಗಾಂಧಿ ನೌಕರಿ ಖಾತರಿ ಯೋಜನೆಯ ಸದುಪಯೋಗ ಪಡಿಸಿ ಒಂದು ವಾರಗಳ ಕಾಲ ಸಾರ್ವಜನಿಕ ಪ್ರದೇಶಗಳ, ಸಾರ್ವಜನಿಕ ಸಂಸ್ಥೆಗಳ ಶುಚೀಕರಣ ನಡೆಸುವ ಸಂಬಂಧ ಸಭೆ ನಡೆಸಲು, ಯೂತ್ ಕ್ಲಬ್ ಗಳ ಬೆಂಬಲ ಈ ನಿಟ್ಟಿನಲ್ಲಿ ಖಚಿತಪಡಿಸಲು ತೀರ್ಮಾನಿಸಲಾಗಿದೆ.
ಇತರ ರಾಜ್ಯಗಳ ಕಾರ್ಮಿಕರ ವಲಯಗಳಲ್ಲಿ ಮೈಕ್ರೋ ಫೈಲೇರಿಯಾ ರೋಗ ಹೆಚ್ಚಳಗೊಳ್ಳುತ್ತಿರುವುದು ಪತ್ತೆಯಾಗಿದ್ದು, ಕಾರ್ಮಿಕ ಅಧಿಕಾರಿ ಕಚೇರಿಯೊಂದಿಗೆ ಸೇರಿ ಆರೋಗ್ಯ ಇಲಾಖೆ ವೈದ್ಯಕೀಯ ಶಿಬಿರ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ರಾತ್ರಿ ಶಿಬಿರಗಳನ್ನು ನಡೆಸಲಾಗುವುದು.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಅಂಟುರೋಗ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ, ಇನ್ನೂ ಇದೇ ಸ್ಥಿತಿ ಮುಂದುವರಿಯಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ವಿ.ಸುರೇಶನ್ ವಿಚಾರ ಮಂಡಿಸಿದರು. ವಿಶೇಷ ಡಿ.ವೈ.ಎಸ್.ಪಿ.ಸುಧಾಕರನ್, ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಇ.ಮೋಹನನ್, ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.




