ತಿರುವನಂತಪುರ: ವಿಯೆಟ್ನಾಂನಿಂದ ಕೇರಳಕ್ಕೆ ಹೂಡಿಕೆ ತರಲು ಕೈಗಾರಿಕೆ ಇಲಾಖೆ ಸಿದತೆ ನಡೆಸಿದೆ. ಈ ಸಂಬಂಧ ವಿಯೆಟ್ನಾಂ ರಾಯಭಾರಿ ಫಾಮ್ ಸಾನ್ ಚೌ ಅವರೊಂದಿಗೆ ಕೈಗಾರಿಕಾ ಸಚಿವ ಪಿ ರಾಜೀವ್ ಮಾತುಕತೆ ನಡೆಸಿದರು. ವಿಯೆಟ್ನಾಂ ನಿಯೋಗವು ವಿಯೆಟ್ನಾಂ-ಕೇರಳ ಸಹಕಾರದ ಕಾರ್ಯಾಗಾರದಲ್ಲಿ ಭಾಗವಹಿಸಲು ತಿರುವನಂತಪುರಕ್ಕೆ ಆಗಮಿಸಿತ್ತು.
ಕೇರಳಕ್ಕೆ ಭೇಟಿ ನೀಡಿದ ವಿಯೆಟ್ನಾಂ ನಿಯೋಗದೊಂದಿಗಿನ ಸಭೆ ಮತ್ತು ಸಂವಹನವು ಅತ್ಯಂತ ಫಲಪ್ರದವಾಗಿದೆ ಎಂದು ಸಭೆಯ ನಂತರ ಕೈಗಾರಿಕಾ ಸಚಿವರು ಹೇಳಿದರು. ವಿಯೆಟ್ನಾಂನಿಂದ ಕೇರಳಕ್ಕೆ ಹೊಸ ಹೂಡಿಕೆಗಳನ್ನು ತರಲು ಸಭೆಯು ತುಂಬಾ ಸಹಕಾರಿಯಾಗಲಿದೆ ಎಂದು ಪಿ ರಾಜೀವ್ ಆಶಿಸಿದರು. ವಿಯೆಟ್ನಾಂ ತಂಡವು ರಾಜ್ಯದೊಂದಿಗೆ ಜಂಟಿ ಯೋಜನೆಗಳನ್ನು ರೂಪಿಸಲು ಅನುಕೂಲಕರ ಪರಿಸ್ಥಿತಿಗಳ ಬಗ್ಗೆ ಮನವರಿಕೆ ಮಾಡಿತು. ಮಸಾಲೆ ವ್ಯಾಪಾರ ಮತ್ತು ಸಂಬಂಧಿತ ಉದ್ಯಮಗಳು ಉತ್ತಮ ಸಾಮಥ್ರ್ಯವನ್ನು ಹೊಂದಿವೆ. ಕೇರಳದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರವು ವಿಯೆಟ್ನಾಂ ಉದ್ಯಮಗಳಿಗೆ ಅನುಕೂಲಕರವಾಗಿದೆ. ಪ್ಲಾಸ್ಟಿಕ್-ರಬ್ಬರ್ ಉತ್ಪಾದನಾ ವಲಯವು ಜಂಟಿ ಉದ್ಯಮಗಳಿಗೆ ಸಹ ಸೂಕ್ತವಾಗಿದೆ ಎಂದು ಪಿ ರಾಜೀವ್ ಹೇಳಿದರು.
ವಿಯೆಟ್ನಾಂ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರವನ್ನು ಕೋರಿದೆ. ಅಂತಹ ಎಲ್ಲಾ ಚಟುವಟಿಕೆಗಳನ್ನು ವಿಯೆಟ್ನಾಂ ಹೂಡಿಕೆ ಪ್ರಚಾರ ಕೇಂದ್ರವು ಮೇಲ್ವಿಚಾರಣೆ ಮಾಡುತ್ತದೆ. ಕೇರಳದ ಗುಣಮಟ್ಟದ ಮಾನವ ಸಂಪನ್ಮೂಲ, ಮೂಲಸೌಕರ್ಯ, ಲಾಜಿಸ್ಟಿಕ್ಸ್, ತ್ವರಿತ ಪರವಾನಗಿ ಸೌಲಭ್ಯಗಳು ಮತ್ತು ಜವಾಬ್ದಾರಿಯುತ ಹೂಡಿಕೆ ನೀತಿಗಳು ದೇಶದಲ್ಲೇ ಅತ್ಯುತ್ತಮವಾಗಿವೆ. ಪರಸ್ಪರ ಸಹಕಾರವನ್ನು ಹೆಚ್ಚಿಸಲು ನಿರ್ವಾಹಕರು ಮತ್ತು ಉದ್ಯಮಿಗಳು ಸೇರಿದಂತೆ ವಿಯೆಟ್ನಾಂ ನಿಯೋಗವನ್ನು ಕೇರಳಕ್ಕೆ ಆಹ್ವಾನಿಸಲಾಗಿತ್ತು ಎಂದು ಅವರು ಹೇಳಿದರು. ಇದೇ ವೇಳೆ ಕೈಗಾರಿಕೋದ್ಯಮಿಗಳು ಕೇರಳ ಬಿಟ್ಟು ಬೇರೆ ರಾಜ್ಯಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ವ್ಯವಹಾರ ನಿರ್ವಹಿಸುವಂತೆ ವಿಯೆಟ್ನಾಂಗೆ ಸರ್ಕಾರ ಆಹ್ವಾನ ನೀಡಿದೆ.




