ಕಾಸರಗೋಡು: ಮತದಾರರ ಪಟ್ಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವಲ್ಲಿ ಕಾಸರಗೋಡು ಜಿಲ್ಲೆ ತೀರಾ ಹಿಂದುಳಿದಿದ್ದು, ರಾಜಕೀಯ ಪಕ್ಷಗಳು ಒಟ್ಟಾಗಿ ಆಧಾರ್ ಲಿಂಕ್ ಮಾಡಲು ಮುಂದಾಗಬೇಕು ಎಂದು ಮತದಾರರ ಪಟ್ಟಿ ವೀಕ್ಷಕ ಅಲಿ ಅಸ್ಕರ್ ಪಾಷಾ ತಿಳಿಸಿದ್ದರೆ. ಪ್ರಕಟಗೊಂಡಿರುವ ಮತದಾರರ ಕರಡು ಪಟ್ಟಿಗೆ ಸಂಬಂಧಿಸಿದಂತೆ ಚರ್ಚಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೇ.50ಕ್ಕಿಂತ ಕಡಿಮೆ ಆಧಾರ್ ಜೋಡಣೆ ಮಾಡಲಾಗಿದೆ. ಡಬಲ್ ಎಂಟ್ರಿ ಆಗದಂತೆ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ. ಪ್ರಕಟಿಸಿದ ಕರಡು ಪಟ್ಟಿಗೆ ಸಂಬಂಧಿಸಿದಂತೆ ಇದುವರೆಗೆ ಜಿಲ್ಲೆಯಲ್ಲಿ ಕಡಿಮೆ ದೂರುಗಳು ಲಭಿಸಿದೆ. ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು ಕಡಿತಗೊಳಿಸಿಲ್ಲ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್‍ಚಂದ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾಧಿಕಾರಿ ಕೆ.ನವೀನ್‍ಬಾಬು ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿವರಿಸಿದರು. ಜನವರಿ 1, 2023 ರಂದು 18 ವರ್ಷಗಳನ್ನು ಪೂರ್ಣಗೊಳಿಸುವವರು ಮತ್ತು ಮುಂದಿನ ಅಕ್ಟೋಬರ್ 1 ಕ್ಕೆ 18 ವರ್ಷಗಳನ್ನು ಪೂರ್ಣಗೊಳಿಸುವವರು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅವರ ಅರ್ಜಿಗಳ ಪರಿಶೀಲನೆ ಮತ್ತು 18 ವರ್ಷ ತುಂಬಿದ ನಂತರ, ಅವರ ಹೆಸರನ್ನು ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರಿಂದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಡಿಸೆಂಬರ್ 8ರವರೆಗೆ ಹೆಸರು ಸೇರ್ಪಡೆ, ಅಳಿಸುವಿಕೆ ಸೇರಿದಂತೆ ವಿವಿಧ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಸದರ ಪ್ರತಿನಿಧಿ ಎಂ. ಅಸಿನಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಟಿ.ಎಂ.ಎ.ಕರೀಂ, ಎಂ.ಕುಞಂಬು ನಂಬಿಯಾರ್, ಮೂಸಾ ಬಿ.ಚೆರ್ಕಳ, ಬಿಜು ಉಣ್ಣಿತ್ತಾನ್, ಮನುಲಾಲ್ ಮೇಲತ್, ಚುನಾವಣಾ ಆಡಳಿತಾಧಿಕಾರಿಗಳು ಮತ್ತಿತರರಿದ್ದರು.
ಮತದಾರರ ಪಟ್ಟಿಗೆ ಆಧಾರ್ ಜೋಡಣೆಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ
0
ಡಿಸೆಂಬರ್ 03, 2022
Tags





