ಕಾಸರಗೋಡು: ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತರಹಿತ ಆಡಳಿತಕ್ಕಾಗಿ ಹಾಗೂ ಬಡಜನತೆಯ ಅಭ್ಯುದಯಕ್ಕಾಗಿ ಹೋರಾಟ ನಡೆಸುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವುದಾಗಿ ಕುಂಬಳೆ ಸನಿಹದ ನಾಯ್ಕಾಪು ನಿವಾಸಿ ಕೇಶವ ನಾಯಕ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ನಾನಾ ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಸಪರ್ಧಿಸುತ್ತಿದೆ. ಚುನಾವಣೆಯಲ್ಲಿ ಗೆದ್ದ ನಂತರ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಅವರ ಅಗತ್ಯಗಳನ್ನು ಪೂರೈಸದೆ ಮತದಾರರನ್ನು ಕಡೆಗಣಿಸಿ ತಮ್ಮ ಪಾಡಿಗೆ ತಾವಿರುತ್ತಾರೆ. ಬಡವಮತದಾರರ ಪರವಾಗಿ ಪ್ರಾಮಾಣಿಕವಾಗಿ ದುಡಿದು ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗುವ ನಿಟ್ಟಿನಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಲೋಕಸಬ ಕ್ಷೇತ್ರದಿಂದ, ಉಳಿದೆಲ್ಲ ರಾಜಕೀಯ ಪಕ್ಷಗಳಿಗೆ ದಿಟ್ಟ ಉತ್ತರ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.


