ಕುಂಬಳೆ: ಆರಿಕ್ಕಾಡಿ ಕೋಟೆ ವಠಾರದ ಪಾಳುಬಾವಿಯಲ್ಲಿ ನಿಧೀ ಶೋಧ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಮತ್ತೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ದೂರಿನನ್ವಯ ಮೊಗ್ರಾಲ್ ಪುತ್ತೂರು ಗ್ರಾ.ಪಂ. ಉಪಾಧ್ಯಕ್ಷ ಮುಜೀಬ್ ರಹಮಾನ್ ಕಂಬಾರು ಸೇರಿದಂತೆ ಐವರ ತಂಡದ ವಿರುದ್ಧ ಈ ಕೇಸು ದಾಖಲಾಗಿದೆ. ಕೊಟೆಯ ಒಳಗೆ ಅನುಮತಿ ರಹಿತವಾಗಿ ಪ್ರವೇಶಿಸಿ ಪ್ರಾಚೀನ ಬಾವಿಯಲ್ಲಿ ಇದೆಯೆನ್ನಲಾದ ನಿಧಿಯನ್ನು ಅಗೆದು ತೆಗೆಯಲು ಪ್ರಯತ್ನಸಿದ ಘಟನೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಕೇಸು ದಾಖಲಾಗಿದೆ.
ಆರಿಕ್ಕಾಡಿ ಕೋಟೆಯ ಕಾವಲು ಮತ್ತು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಮಾರ್ಗದರ್ಶನಕ್ಕಾಗಿ ಪ್ರಾಚ್ಯವಸ್ತು ಇಲಾಖೆ ಕೇರಳ ಘಟಕ ನೇಂಇಸಿರುವ ಚೆಂಬೇರಿ ನಿವಾಸಿ ನಿಶಾಂತ್ ಎಂಬವರು ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ನಿಧಿ ಅಪಹರಣದಷ್ಟೇ ನಿಧಿಶೋಧನೆಯೂ ಗಂಭೀರ ಅಪರಾಧವಾಗಿದ್ದು, ಅಪರಾಧಿಗಳನ್ನು ಸೆರೆಹಿಡಿದಿದ್ದ ಪೊಲೀಸರು ಠಾಣೆಯಿಂದಲೇ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದರು. ಪ್ರಾಚ್ಯವಸ್ತು ಇಲಾಖೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಡುಗಡೆಗೊಂಡ ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಲು ಮುಂದಗಿದ್ದಾರೆ.

