ಕಾಸರಗೋಡು: ಹಿಮಾಚಲ ಪ್ರದೇಶದ ಕುಲು-ಮನಾಲಿ ಪ್ರದೇಶದಲ್ಲಿ ಭಾರೀ ಭೂಕುಸಿತದಿಂದ ಕಾಸರಗೋಡು ಹಾಗೂ ತಿರುವನಂತಪುರ ಜಿಲ್ಲೆಯಿಂದ ಅಧ್ಯಯನ ಪ್ರವಾಸ ತೆರಳಿರುವ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಹಾದಿ ಮಧ್ಯೆ ಸಿಲುಕಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಚೀಮೆನಿ ಇಂಜಿನಿಯರಿಂಗ್ ಕಾಲೇಜಿನಿಂದ ಇಲೆಕ್ಟ್ರಾನಿಕ್ ಬ್ರಾಂಚ್ ಹಾಗೂ ಕಂಪ್ಯೂಟರ್ ಸಯನ್ಸ್ ವಿಭಾಗದ ವಿದ್ಯಾರ್ಥಿಗಳು ಫೆ. 20ರಂದು ಉತ್ತರ ಭಾರತ ಪ್ರವಾಸ ಕೈಗೊಂಡಿದ್ದು, ತಂಡ ಕುಲು-ಮನಾಲಿ ತಲುಪುತ್ತಿದ್ದಂತೆ ಎರಡು ದಿವಸಗಳ ಕಾಲ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ ವಸತಿಕೇಂದ್ರದಿಂದ ಹೊರಬರಲಾಗದ ಎದುರಾಗಿತ್ತು. ಇದರಿಂದ ಪ್ರವಾಸ ಅರ್ಧಕ್ಕೆ ಸ್ಥಗಿತಗೊಳಿಸಿ ದೆಹಲಿಗೆ ತೆರಳಲು ಸಿದ್ಧರಾಗುತ್ತಿದ್ದಂತೆ ಭಾರೀ ಭೂಕುಸಿತದಿಂದ ಮುಂದೆ ಸಂಚರಿಸಲಾಗದೆ, ಇವರೆಲ್ಲರೂ ಮತ್ತೆ ತಮ್ಮ ವಾಸ್ತವ್ಯ ಕೇಂದ್ರಕ್ಕೆ ವಾಪಸಾಗಬೇಕಾಗಿ ಬಂದಿತ್ತು. ಫೆ. 28ರಂದು ಮಣ್ಣಿನೊಂದಿಗೆ ಬೃಹತ್ ಬಂಡೆಗಳು, ಮರಗಳು ರಸ್ತೆಗೆ ರಾಶಿಬಿದ್ದಿದ್ದು, ಇದನ್ನು ತೆರವುಗೊಳಿಸದೆ ಪ್ರವಾಸಿಗರ ವಾಹನ ಮುಂದೆ ಸಂಚರಿಸಲಾಗದ ಸ್ಥಿತಿಯಿದೆ. ಮಾ. 2ರಂದು ಊರಿಗೆ ತಲುಪುವ ಯೋಜನೆ ಇರಿಸಿಕೊಂಡಿದ್ದರೂ, ರಸ್ತೆಗೆ ಬಿದ್ದಿರುವ ಮಣ್ಣು ತೆರವುಗೊಳಿಸುವ ಪ್ರಕ್ರಿಯೆ ಇನ್ನೂ ಪೂರ್ತಿಗೊಳ್ಳದ ಹಿನ್ನೆಲೆಯಲ್ಲಿ ತಲುಪುವುದು ವಿಳಂಬವಾಗಲಿದೆ. ಪ್ರವಾಸಿಗರೆಲ್ಲರೂ ಸುರಕ್ಷಿತವಾಗಿರುವುದಾಗಿ ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ. ಚೀಮೇನಿ ಇಂಜಿನಿಯರಿಂಗ್ ಕಾಲೇಜಿನ 23ವಿದ್ಯಾರ್ಥಿನಿಯರು, 20ಮಂದಿ ವಿದ್ಯಾರ್ಥಿಗಳು, ಇಬ್ಬರು ಅಧ್ಯಾಪಕರು, ಮೂವರು ಗೈಡ್‍ಗಳು ಹಾಗೂ ಇಬ್ಬರು ಬಸ್ ಸಿಬ್ಬಂದಿ ಒಳಗೊಂಡಂತೆ 50ಮಂದಿ ಇದ್ದಾರೆ.
ತಿರುವನಂತಪುರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಿ 119ಮಂದಿ ವಿದ್ಯಾರ್ಥಿಗಳು ಹಾಗೂ ಶೀಕ್ಷಕರು ಪ್ರವಾಸದಲ್ಲಿದ್ದಾರೆ.




