ಕಾಸರಗೋಡು: ಹೊಸದುರ್ಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಮತ್ತೊಬ್ಬ ಬಾಂಗ್ಲಾ ಪ್ರಜೆಯನ್ನು ಹೊಸದುರ್ಗ ಠಾಣೆ ಪೊಲೀಸರ ಸಹಕಾರದೊಂದಿಗೆ ಕಣ್ಣೂರಿನ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಬಂಧಿಸಿದೆ. ನಕಲಿ ದಾಖಲೆ ಪತ್ರಗಳೊಂದಿಗೆ ಕಳೆದ ಹಲವು ಸಮಯದಿಂದ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಲಾ ಅಲಯಿಲ್ ಪೂಡಂಕಲ್ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿದ್ದ ಈತನನ್ನು ವಿಶೇಷ ಕಾರ್ಯಾಚರಣೆಯೊಂದಿಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈತನಲ್ಲಿದ್ದ ಗುರುತಿನ ಚೀಟಿಯಲ್ಲಿ ನಮೂದಿಸಿರುವ ಪ್ರಕಾರ ಸಾಬಿರ್ ಶೇಖ್ ನಾಬಿಯ(24)ಎಂಬ ಹೆಸರಿನೊಂದಿಗೆ ನೆಲೆಸಿದ್ದು, ಈ ಬಗ್ಗೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಈ ಹೆಸರು ನಕಲಿ ಎಂದು ಗುರುತಿಸಲಾಗಿದೆ. ಈತನ ವಶದಲ್ಲಿ ಯಾವುದೇ ಅಸಲಿ ದಾಖಲೆಗಳಿಲ್ಲದಿರುವುದು ಸಂಶಯಕ್ಕೆಡೆಮಾಡಿಕೊಟ್ಟಿದೆ. ಮೊಬೈಲಲ್ಲಿ ತೆಗೆಸಿದ ಫೋಟೋ ಮಾತ್ರ ಈತನ ವಶದಲ್ಲಿದೆ. ತಾನು ಪಶ್ಚಿಮ ಬಂಗಾಳ ನಿವಾಸಿಯಾಗಿದ್ದು, ಅಸಲಿ ದಾಖಲೆಗಳೆಲ್ಲ ಯಾತ್ರೆ ಮಧ್ಯೆ ಕಳೆದುಕೊಂಡಿದ್ದೇನೆ. ತನ್ನ ಸಂಬಂಧಿಕರೆಲ್ಲರೂ ಮೃತಪಟ್ಟಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾನೆ. ಈತನ ಹೇಳಿಕೆಗಳೆಲ್ಲ ಸುಳ್ಳಾಗಿದ್ದು, ಈತ ಬಾಂಗ್ಲಾ ನಿವಾಸಿಯೆಂದು ತನಿಖೆಯಿಂದ ಸ್ಪಷ್ಟಗೊಂಡಿದೆ.
ಕ್ವಾಟ್ರಸ್‍ನಲ್ಲಿ ಈತನಿಗೆ ತಂಗಲು ಅವಕಾಶ ಮಾಡಿಕೊಟ್ಟಿರುವ ಕ್ವಾಟ್ರಸ್ ಮಾಲಿಕನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ. ಇತ್ತೀಚೆಗಷ್ಟೆ ಪಶ್ಚಿಮ ಬಂಗಾಳ ನಿವಾಸಿ ಎಂದು ಪಡನ್ನಕ್ಕಾಡಿನಲ್ಲಿ ವಾಸ್ತವ್ಯ ಹೂಡಿದ್ದ ಬಾಂಗ್ಲಾ ನಿವಾಸಿಯನ್ನು ಬಂಧಿಸಲಾಗಿದ್ದು, ನಂತರ ವಿಚಾರಣೆಯಿಂದ ಈತ ಬಾಂಗ್ಲಾ ದೇಶದ ಭಯೋತ್ಪಾದನಾ ಸಂಘಟನೆ ಸದಸ್ಯನೆಂದು ಖಚಿತಗೊಂಡಿತ್ತು. ಹಿಂದೂ ಮುಖಂಡರ ಹಾಗೂ ಕೆಲವು ಉನ್ನತ ರಾಜಕೀಯ ಪಕ್ಷಗಳ ನೇತಾರರ ಹತ್ಯೆ ನಡೆಸಿ, ಈ ಮೂಲಕ ಕೋಮುಗಲಭೆ ನಡೆಸುವ ಸಂಚು ನಡೆಸಿದ್ದನೆಂಬುದು ತನಿಖೆಯಿಂದ ವ್ಯಕ್ತವಾಗಿತ್ತು.
ಗಡಿ ದಾಟಿ ಬರುವವರು ಕೇರಳಕ್ಕೆ...:
ಬಾಂಗ್ಲಾ ಗಡಿ ದಾಟಿ ಭಾರತದೊಳಗೆ ಆಗಮಿಸುವ ಬಾಂಗ್ಲಾ ಪ್ರಜೆಗಳು ನಕಲಿ ಗುರುತಿನ ಚೀಟಿ ತಯಾರಿಸಿ ನೇರ ಕೇರಳಕ್ಕೆ ತಲುಪುತ್ತಿದ್ದು, ಇಲ್ಲಿ ಪಶ್ಚಿಮ ಬಂಗಾಳ ನಿವಾಸಿಗಳ ಸೋಗಿನಲ್ಲಿ ವಾಸ್ತವ್ಯ ಹೂಡುತ್ತಿರುವುದಾಗಿ ಕೇಂದ್ರ ಗುಪ್ತಚರ ವಿಭಾಗಕ್ಕೂ ಸ್ಪಷ್ಟ ಮಾಹಿತಿ ಲಭಿಸಿದೆ. ಕೇರಳದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಬಗ್ಗೆ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಕಾಸರಗೋಡು ಜಿಲ್ಲೆಯ ನಾನಾ ಕೆಂಪುಕಲ್ಲು, ಕರ್ಗಲ್ಲು ಕ್ವಾರೆಗಳು, ಮರದ ಕಾರ್ಖಾನೆಗಳಲ್ಲಿ ಪಶ್ಚಿಮ ಬಂಗಾಳ ನಿವಾಸಿಗಳ ಸೋಗಿನಲ್ಲಿ ಬಾಂಗ್ಲಾ ಪ್ರಜೆಗಳು ಕೆಲಸ ನಿರ್ವಹಿಸುತ್ತಿದ್ದು, ಇವರ ಅನಧಿಕೃತ ವಾಸ್ತವ್ಯಕ್ಕೆ ಕ್ವಾಟ್ರಸ್ ಮಾಲಿಕರು ವ್ಯವಸ್ಥೆ ಕಲ್ಪಿಸಿಕೊಡುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.






