ನವದೆಹಲಿ: ಬಾಂಗ್ಲಾದೇಶ ಸರ್ಕಾರವು ಅದಾನಿ ಪವರ್ ಕಂಪನಿಗೆ ಜೂನ್ ತಿಂಗಳಲ್ಲಿ ₹3,282 ಕೋಟಿ ಪಾವತಿ ಮಾಡಿದೆ. ಕಂಪನಿಗೆ ಬಾಕಿ ಇರಿಸಿಕೊಂಡಿರುವ ಮೊತ್ತವನ್ನು ಈ ಮೂಲಕ ಅದು ತಗ್ಗಿಸಿಕೊಂಡಿದೆ.
ವಿದ್ಯುತ್ ಪೂರೈಕೆ ಒಪ್ಪಂದದ ಭಾಗವಾಗಿ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದಿಂದ ಅದಾನಿ ಪವರ್ ಕಂಪನಿಗೆ ₹3,735 ಕೋಟಿ ಪಾವತಿ ಆಗಬೇಕಿದೆ. ಆ ಪೈಕಿ ₹3,282 ಕೋಟಿ ಪಾವತಿ ಆಗಿದೆ ಎಂದು ಮೂಲಗಳು ಹೇಳಿವೆ.
ಬಾಂಗ್ಲಾದೇಶವು ಪಾವತಿ ಮಾಡಬೇಕಿರುವ ಮೊತ್ತವನ್ನು ಸರಿಯಾಗಿ ಪಾವತಿ ಮಾಡದ ಕಾರಣಕ್ಕೆ ಅದಾನಿ ಪವರ್ ಕಂಪನಿಯು ವಿದ್ಯುತ್ ಪೂರೈಕೆಯನ್ನು ಅರ್ಧದಷ್ಟು ಕಡಿಮೆ ಮಾಡಿತ್ತು. ಆದರೆ, ಬಾಂಗ್ಲಾದೇಶದಿಂದ ಆಗುವ ಮಾಸಿಕ ಪಾವತಿಗಳು ಬಾಕಿ ಮೊತ್ತವನ್ನೂ ಒಳಗೊಳ್ಳುವುದು ಆರಂಭವಾದ ನಂತರ ಕಂಪನಿಯು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯನ್ನು ಈ ವರ್ಷದ ಮಾರ್ಚ್‌ನಲ್ಲಿ ಪುನರಾರಂಭಿಸಿದೆ.




