ಬಾಲೇಶ್ವರ: ಪ್ರವಾಹದಿಂದ ತತ್ತರಿಸಿರುವ ಒಡಿಶಾದಲ್ಲಿ ಸುವರ್ಣರೇಖಾ ನದಿ ನೀರಿನ ಮಟ್ಟ ಭಾನುವಾರ ಕೊಂಚ ಇಳಿಮುಖಗೊಂಡಿದೆ. ಆದರೆ ಬಾಲೇಶ್ವರ ಜಿಲ್ಲೆಯ 50 ಹಳ್ಳಿಗಳು ಜಲಾವೃತಗೊಂಡಿದ್ದು, ಯುವಕನೊಬ್ಬ ನಾಪತ್ತೆಯಾಗಿದ್ದಾನೆ.
ಶನಿವಾರ ಉಂಟಾದ ಪ್ರವಾಹದಲ್ಲಿ ಬಾಲೈಪಾಲ್ ಬ್ಲಾಕ್‌ನ ಬಿಷ್ಣುಪುರ್ ಗ್ರಾಮ ಪಂಚಾಯಿತಿಯ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆಯು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ.
'ಯಾವುದೇ ಮುನ್ಸೂಚನೆ ನೀಡದೆ ಜಾರ್ಖಂಡ್‌ನ ಚಾಂದಿಲ್ ಅಣೆಕಟ್ಟೆಯಿಂದ ಏಕಾಏಕಿ ನೀರು ಬಿಟ್ಟದ್ದರಿಂದ ಒಡಿಶಾದ ಬಾಲೈಪಾಲ್, ಭೋಗರೈ, ಬಸ್ತಾ ಹಾಗೂ ಜಲೇಶ್ವರ ಪ್ರದೇಶದ 50 ಸಾವಿರಕ್ಕೂ ಹೆಚ್ಚಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಕ್ರಿಮಿನಲ್ ಕೃತ್ಯವಾಗಿದೆ' ಎಂದು ಸಂಸದ ಪ್ರತಾಪ್ ಸಾರಂಗಿ ಆರೋಪಿಸಿದ್ದಾರೆ.
'ಪ್ರವಾಹ ಪರಿಸ್ಥಿತಿ ಸುಧಾರಿಸಿದ್ದು, ಸುವರ್ಣರೇಖಾ ನದಿ ನೀರಿನ ಮಟ್ಟ ಕಡಿಮೆಯಾಗಿದೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಜಘಾಟ್‌ನಲ್ಲಿ ಅಪಾಯಕಾರಿ ಮಟ್ಟವಾದ 10.36 ಮೀಟರ್ ಬದಲಿಗೆ 9.94 ಮೀ. ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಶನಿವಾರ ಈ ನೀರಿನ ಮಟ್ಟ ಅತಿ ಹೆಚ್ಚು ಅಂದರೆ 11 ಮೀಟರ್ ಇತ್ತು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.




