ಕಾಸರಗೋಡು: ಮುಂದೆ ನಡೆಯಲಿರುವ ಸ್ಥಳೀಯಾಡಳಿತ ಚುನಾವಣಾ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ನಡೆಸಿ ಮತದಾರರ ಪಟ್ಟಿ ನವೀಕರಿಸಿ ಪ್ರಕಟಿಸುವ ಕಾಲಾವಧಿಯನ್ನು ಆಗಸ್ಟ್ 12ರತನಕ ಮುಂದೂಡಲಾಗಿದೆ. ಇದರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇನ್ನೂ ಅವಕಾಶ ದೊರೆತಿದೆ.
ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆಯ ಅವಧಿ ವಿಸ್ತರಿಸುವಂತೆ ವಿವಿಧ ರಾಜಕೀಯ ಪಕ್ಷಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ತೀರ್ಮಾನ ಕೈಗೊಂಡಿದೆ.
ಈಗಾಗಲೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೃಹ ಸಂಪರ್ಕ ನಡೆಸಿ ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಕೆಲಸ ನಡೆಸುತ್ತಿದ್ದಾರೆ. ಪರಿಣಾಮವಾಗಿ ಕಳೆದ ಎರಡು ವಾರಗಳಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಿನಂತಿಸಿ 19.21ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದೆ. ಇದು ಇನ್ನೂ ಹೆಚ್ಚಲು ಸಧ್ಯವಿದೆ.
ಈಗಾಘಲೇ ಸಲ್ಲಿಕೆಯಗಿರುವ ಅರ್ಜಿಗಳ ಹಿಯರಿಂಗ್ ಇನ್ನೂ ಸಂಪೂರ್ಣವಾಗಿಲ್ಲ. ಅರ್ಜಿದಾರರನ್ನು ಹಿಯರಿಂಗ್‍ಗೆ ಆಹ್ವಾನಿಸುವ ಸಂದರ್ಭ ಕೆಲವೊಮ್ಮೆ ಅವರು ಸ್ಥಳದಲ್ಲಿ ಇಲ್ಲದ ಸಮಸ್ಯೆಯಿಂದಾಗಿ ಈ ತೊಡಕುಂಟಾಗಿದೆ. ಈಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಯಾಗಿದೆ. ಈ ಹಿಂದೆ ಜುಲೈ 23ರಂದು ಮತದಾರರ ಕರಡು ಪಟ್ಟಿ ಪ್ರಕಟಣೆಯಾಗಿತ್ತು. ಪಟ್ಟಿಯ ಕುರಿತು ಆಕ್ಷೇಪ ಮತ್ತು ಮತದಾರರ ಸೇರ್ಪಡೆಗೆ ಆಗಸ್ಟ್ 7ರ ತನಕ ಅವಕಾಶ ನೀಡಲಾಗಿತ್ತು. ಈ ಕಾಲಾವಧಿ ವಿಸ್ತರಿಸಿ ಘೋಷಿಸಲಾಗಿದೆ. ಮತದಾರರ ಕರಡು ಪಟ್ಟಿ ಈಗಾಗಲೇ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆ, ಗ್ರಾಮ ಕಚೇರಿ, ತಾಲೂಕು ಕಚೇರಿಗಳಲ್ಲಿ ಮತ್ತು ಚುನಾವಣಾ ಆಯೋಗದ ವೆಬ್‍ಸೈಟ್‍ಮಲ್ಲೂ ಲಭ್ಯವಿರಲಿದೆ.
ಮತದಾರರ ಪಟ್ಟಿ ನವೀಕರಣದ ಭಾಗವಾಗಿ ಅರ್ಜಿಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವವರಿಗೆ ಅನುಕೂಲವಾಗುವಂತೆ ಸಾರ್ವಜನಿಕ ರಜಾ ದಿನವಾಗಿರುವ ಆಗಸ್ಟ್ 9 ಮತ್ತು 10 ರಂದು ಸ್ಥಳೀಯಾಡಳಿತ ಸಂಸ್ಥೆಗಳು ತೆರೆದುಕಾರ್ಯಾಚರಿಸಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಈ ದಿನಗಳಲ್ಲಿ ಕಚೇರಿಯಲ್ಲಿ ಹಾಜರಾಗುವ ಅರ್ಜಿದಾರರ ವಿಚಾರಣೆ, ಆಕ್ಷೇಪಣೆಗಳನ್ನು (ಫಾರ್ಮ್ 5) ಸಲ್ಲಿಸುವುದು, ಅರ್ಜಿ ಸ್ವೀಕರಿಸುವುದು ಸೇರಿದಂತೆ ಮತದಾರರ ಪಟ್ಟಿಯ ನವೀಕರಣಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಕೈಗೊಳ್ಳಲು ಆಯೋಗವು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

