ನವದೆಹಲಿ: ಇತ್ತಿಚಿಗಷ್ಟೆ ಸುಪ್ರೀಂ ಕೋರ್ಟ್ ದೆಹಲಿಯಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಆದೇಶ ನೀಡಿತ್ತು. ಆನಂತರ ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ಶುರುವಾಗಿದ್ದವು. ಬೆಂಗಳೂರಿನಲ್ಲೂ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಬೇಕಾ? ಬೇಡವಾ ಎಂಬೆಲ್ಲಾ ಚರ್ಚೆಗಳು ಪ್ರಾರಂಭವಾಗಿದ್ದವು.
ಇದೀಗ ರೇಬೀಸ್ ಇರುವ ನಾಯಿಗಳನ್ನು ಹೊರತು ಪಡಿಸಿ ಎಲ್ಲಾ ಬೀದಿ ನಾಯಿಗಳನ್ನು ಮತ್ತೆ ಸ್ಥಳಾಂತರಿಸುವಂತೆ ಆದೇಶಿಸಿದೆ. ಈ ಕುರಿತಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡಲಾಗಿದೆ.
ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ ಏನು?
- ಪ್ರತಿ ವಾರ್ಡ್‌ನಲ್ಲಿ ಆಹಾರ ನೀಡುವ ಪ್ರದೇಶಗಳನ್ನು ಗುರುತಿಸಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು.
- ಇತರೆ ಪ್ರದೇಶಗಳಲ್ಲಿ ನಾಯಿಗಳಿಗೆ ಆಹಾರ ನೀಡುವಂತ್ತಿಲ್ಲ.
- ಸಾಮಾನ್ಯ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುವುದರಿಂದ ಅನಿಯಂತ್ರಿತ ಆಹಾರ ನೀಡುವಿಕೆಯನ್ನು ಅನುಮತಿಸಲಾಗುವುದಿಲ್ಲ.
- ಉಲ್ಲಂಘನೆಗಳ ವಿರುದ್ಧ ದೂರು ನೀಡಲು ಸಹಾಯವಾಣಿ ರಚಿಸಲು ಸೂಚನೆ.
ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಬಾರದು. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ನಿಂದ ಎಲ್ಲ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಲು ಅನುಮತಿ ಇಲ್ಲ. ಬೀದಿ ನಾಯಿಗಳಿಗೆ ಆಹಾರ ನೀಡಲು ಮೀಸಲಾದ ಸ್ಥಳಗಳನ್ನು ರಚಿಸಬೇಕು. ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿರುವುದು ಕಂಡುಬಂದರೆ, ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ನಾಯಿಗಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಲು ಪ್ರಾಣಿ ಪ್ರಿಯರಿಗೆ ಅವಕಾಶ ನೀಡಿದ್ದರು ಕೂಡ ಮತ್ತೆ ನಾಯಿಗಳನ್ನು ಬೀದಿಗೆ ಬಿಡದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಪ್ರತಿಯೊಬ್ಬ ಅರ್ಜಿದಾರರು ಹಾಗೂ ಸರ್ಕಾರೇತರ ಸಂಸ್ಥೆಗಳು ಕ್ರಮವಾಗಿ 25,000 ಹಾಗೂ 2 ಲಕ್ಷ ರೂ.ಗಳನ್ನು ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಇನ್ನು ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಆದರೆ ರೇಬೀಸ್ ಅಥವಾ ಆಕ್ರಮಣಕಾರಿ ನಡವಳಿಕೆವುಳ್ಳ ನಾಯಿಗಳಿಗೆ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯದಲ್ಲಿ ಇಡಬೇಕು ಎಂದು ನಿರ್ದೇಶನ ನೀಡಿದೆ.




