HEALTH TIPS

ಉತ್ತರಾಖಂಡದಲ್ಲಿ ಮೇಘಸ್ಫೋಟ: 15 ಮಂದಿ ಸಾವು, ಹಲವರು ನಾಪತ್ತೆ

 ಲಖನೌ: ಉತ್ತರಾಖಂಡದ ಹಲವೆಡೆ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದಾಗಿ 15 ಮಂದಿ ಮೃತಪಟ್ಟಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ.

ಸೋಮವಾರ ರಾತ್ರಿಯಿಂದ ಸುರಿದ ನಿರಂತರ ಮಳೆಯಿಂದಾಗಿ ಗರ್ವಾಲ್ ಪ್ರದೇಶದಲ್ಲಿ ಭಾರಿ ಹಾನಿಯಾಗಿದೆ. ಹಲವಾರು ರಸ್ತೆ, ಸೇತುವೆ, ಹೊಟೇಲ್ ಮತ್ತು ಅಂಗಡಿಗಳು ತೀವ್ರವಾಗಿ ಹಾನಿಗೊಂಡಿವೆ.


ಡೆಹ್ರಾಡೂನ್‌ ಸಮೀಪದ ಪ್ರವಾಸಿತಾಣ ಸಹಸ್ತ್ರಧಾರದಲ್ಲಿ ಮೇಘಸ್ಫೋಟವಾಗಿದೆ. ಇದರಿಂದಾಗಿ ಸಮೀಪದ ಕರ್ಲಿಗಡ್‌ ಮತ್ತು ಮಜಿಯಾರ್‌ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಹಲವು ಮಂದಿ ಅವ‌ಶೇಷಗಳಡಿ ಸಿಲುಕಿದ್ದಾರೆ.

ಟ್ರ್ಯಾಕ್ಟರ್‌ ಟ್ರಾಲಿಯೊಂದು ನದಿಯಲ್ಲಿ ಮುಳುಗಿದ ಪರಿಣಾಮ ಅದರಲ್ಲಿದ್ದ ಐವರು ಕಾರ್ಮಿಕರು

ಮೃತಪಟ್ಟಿದ್ದಾರೆ. ಎಂಟು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಚಕ್ರತಾಳಿ ರಸ್ತೆಯಲ್ಲಿ ಸ್ಕೂಟರ್‌ ಮೇಲೆ ಬಂಡೆ ಉರುಳಿಬಿದ್ದಿದ್ದರಿಂದ ಯುವಕರೊಬ್ಬರು ಮೃತಪ‌ಟ್ಟಿದ್ದಾರೆ. ರಾಜ್‌ಪುರ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಟೋನ್‌ ನದಿ ಪ್ರವಾಹದಿಂದಾಗಿ ಹಲವಾರು ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ಮೂರು ಮೃತದೇಹಗಳು ಪತ್ತೆಯಾಗಿವೆ. ಮನೆಯ ಕೊಠಡಿಯ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.ಡೆ‌ಹ್ರಾಡೂನ್‌-ಮುಸೂರಿ ರಸ್ತೆಯಲ್ಲಿ ಹಲವೆಡೆ ಭೂಕುಸಿತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸೇತುವೆ ಕೊಚ್ಚಿಹೋದ ಕಾರಣ ಡೆಹ್ರಾಡೂನ್‌-ಪಒಂಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ.

'ಯೆಲ್ಲೊ ಅಲರ್ಟ್‌': ಚಮೋಲಿ, ಚಂಪಾವತ್‌, ಉದಮ್‌ಸಿಂಗ್‌ ನಗರ, ಬಗೇಶ್ವರ್‌, ನೈನಿತಾಲ್ ಮತ್ತು ಡೆಹ್ರಾಡೂನ್ ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್‌' ಘೋಷಿಸಲಾಗಿದೆ. ಸೆ.21ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹರಿದ್ವಾರದಲ್ಲೂ ಭಾರಿ ಮಳೆಯಾಗಿದೆ. ಬಂಡೆಗಳು ಉರುಳಿಬಿದ್ದಿರುವ ಕಾರಣ ಬದರೀನಾಥ ಹೆದ್ದಾರಿಯಲ್ಲಿಯೂ ಸಂಚಾರ ಸ್ಥಗಿತವಾಗಿದೆ.

ಮಹಾರಾಷ್ಟ್ರ: ಮೂವರು ಸಾವು

ಮುಂಬೈ: ಮಹಾರಾಷ್ಟ್ರದಲ್ಲಿಯೂ ಭಾರಿ ಮಳೆಯಾಗಿದ್ದು ಪ್ರತ್ಯೇಕ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದಾರೆ. 120 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಮರಾಠವಾಡದ 5 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು ಮಂಗಳವಾರ ಮುಂಜಾನೆವರೆಗೆ ಬೀಡ್‌ ಜಿಲ್ಲೆಯಲ್ಲಿ 143.7 ಮಿ.ಮೀ ನಾಂದೇಡ್‌ನಲ್ಲಿ 131.6 ಮತ್ತು ಜಲ್ನಾದಲ್ಲಿ 121.4 ಮಿ.ಮೀ ಮಳೆಯಾಗಿದೆ. ಬೀಡ್‌ ಮತ್ತು ಅಹಲ್ಯಾನಗರದಲ್ಲಿ ತೀವ್ರ ಹಾನಿ ಸಂಭವಿಸಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ತತ್ತರಿಸಿದ ಹಿಮಾಚಲ: ಮೂವರು ಸಾವು

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿಯೂ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯೊಂದು ಕುಸಿದುಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. ಮಂದಿ ಜಿಲ್ಲೆಯಲ್ಲಿ ಹಲವು ಬಸ್‌ ಮತ್ತು ಇತರ ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಒಬ್ಬರು ನಾಪತ್ತೆಯಾಗಿದ್ದಾರೆ. ಸಾರ್ವಜನಿಕ ಮೂಲಸೌಕರ್ಯ ಮತ್ತು ಖಾಸಗಿ ಆಸ್ತಿಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ. ಬಸ್‌ ನಿಲ್ದಾಣವೊಂದು ಮುಳುಗಿದ್ದು 20 ಬಸ್‌ ಗ್ಯಾರೆಜ್‌ ಮತ್ತು ಅಂಗಡಿಗಳಿಗೆ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 650 ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 1250 ವಿದ್ಯುತ್‌ ಘಟಕಗಳು ಮತ್ತು 160 ನೀರು ಸರಬರಾಜು ಘಟಕಗಳಿಗೆ ಹಾನಿಯಾಗಿದೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries