ನವದೆಹಲಿ: ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಷ್ಟ್ರದಾದ್ಯಂತ ಮೂರು ತಿಂಗಳ ಅಭಿಯಾನಕ್ಕೆ ಬಿಜೆಪಿ ಗುರುವಾರ ಚಾಲನೆ ನೀಡಿದೆ.
ಪಂಡಿತ್ ದೀನ ದಯಾಳ್ ಉಪಾದ್ಯಾಯ ಅವರ ಜನ್ಮ ದಿನದಂದು (ಸೆ.25ರಂದು) ಆರಂಭವಾಗಿರುವ ಈ ಸ್ವದೇಶಿ ಅಭಿಯಾನವು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದವರೆಗೂ (ಡಿ.25ರಂದು) ನಡೆಯಲಿದೆ.
ಈ ಅಭಿಯಾನದ ವೇಳೆ ಬಿಜೆಪಿ ಕಾರ್ಯಕರ್ತರು ದೇಶದಾದ್ಯಂತ ಮನೆಮನೆಗೆ ಭೇಟಿ ನೀಡಿ, ಸ್ವದೇಶಿ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿರುವ ಪ್ರಧಾನ ಕಾರ್ಯದರ್ಶೀ ಅರುಣ್ ಸಿಂಗ್ ಅವರು, ಅಭಿಯಾನವು ಸುಮಾರು 20 ಸಾವಿರ 'ಆತ್ಮನಿರ್ಭರ ಭಾರತ ಸಂಕಲ್ಪ' ಕಾರ್ಯಕ್ರಮಗಳು, 1,000 ಉತ್ಸವ, 500 'ಸಂಕಲ್ಪ ರಥ' ಕಾರ್ಯಕ್ರಮಗಳನ್ನು ಒಳಗೊಂಡಿರಲಿದೆ. ಈ ಉಪಕ್ರಮವನ್ನು ಸೆಲೆಬ್ರಿಟಿಗಳು, ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್‌ಗಳು ಆನ್‌ಲೌನ್ ಮೂಲಕ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
'ನಾವು ಯಾವುದೇ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿಲ್ಲ. ಬದಲಾಗಿ, ನಮ್ಮ ನಾಗರಿಕರ ಶ್ರಮವನ್ನು ಪ್ರತಿಬಿಂಬಿಸುವ, ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಪಂಡಿತ್ ದೀನ ದಯಾಳ್ ಅವರು ಒತ್ತಿ ಹೇಳುತ್ತಿದ್ದ ಹಾಗೆ, ಈ ವಿಧಾನವು ಆರ್ಥಿಕ ಸ್ವಾವಲಂಬನೆ ಹಾಗೂ ನಮ್ಮ ಸಾಂಸ್ಕೃತಿಕ ಹೆಮ್ಮೆಯನ್ನು ಪೋಷಿಸುತ್ತದೆ' ಎಂದು ಪ್ರತಿಪಾದಿಸಿದ್ದಾರೆ.




