HEALTH TIPS

ಬಿಹಾರ|ಆರ್‌ಜೆಡಿಯಿಂದ ಮಹಿಳೆಯರಿಗೆ ಸಂಕಷ್ಟ: ಲಾಲು ಪಕ್ಷದ ವಿರುದ್ಧ ಮೋದಿ ವಾಗ್ದಾಳಿ

ಪಟ್ನಾ: ಬಿಹಾರದಲ್ಲಿ ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಮಹಿಳೆಯರು ನಾನಾ ಸಂಕಷ್ಟಗಳಿಗೆ ಸಿಲುಕಿ ತೀವ್ರವಾಗಿ ನೊಂದಿದ್ದರು ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಬಿಹಾರದಲ್ಲಿ ಲಾಲು ಪ್ರಸಾದ್‌ ನೇತೃತ್ವದ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಎಂದಿಗೂ ಅಧಿಕಾರಕ್ಕೆ ಮರಳದಂತೆ ರಾಜ್ಯದ ಮಹಿಳೆಯರು ಖಾತರಿಸಪಡಿಸಬೇಕು' ಎಂದು ಅವರು ಮನವಿ ಮಾಡಿದರು.

ಚುನಾವಣೆ ಸಮೀಪಿಸುತ್ತಿರುವ ಬಿಹಾರದಲ್ಲಿ 'ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆ'ಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ದೆಹಲಿಯಿಂದ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಯೋಜನೆಯಡಿ ರಾಜ್ಯದ 75 ಲಕ್ಷ ಮಹಿಳೆಯರ ಖಾತೆಗೆ ತಲಾ ₹10,000 (ಒಟ್ಟು ₹7,500 ಕೋಟಿ) ವರ್ಗಾಯಿಸಲಾಯಿತು.

'ಆರ್‌ಜೆಡಿ ಅವಧಿಯಲ್ಲಿ ರಾಜ್ಯದಲ್ಲಿ ಅವ್ಯವಸ್ಥೆ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿತ್ತು. ರಸ್ತೆಗಳು ಶಿಥಿಲಗೊಂಡಿದ್ದವು, ಕಾನೂನು ಸುವ್ಯವಸ್ಥೆ ಶೋಚನೀಯವಾಗಿತ್ತು. ಯಾವುದೇ ಸೇತುವೆಗಳಿರಲಿಲ್ಲ. ಪ್ರವಾಹಗಳು ಬಂದಾಗ ತೀವ್ರ ತೊಂದರೆ ಉಂಟಾಗುತ್ತಿತ್ತು. ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳಿಗೆ ತಲುಪಲು ಆಗುತ್ತಿರಲಿಲ್ಲ. ಆದರೆ, ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರದ ಅಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಮತ್ತು ಸುಧಾರಣೆಗಳಾಗಿವೆ. ಇದಕ್ಕಾಗಿ ಸರ್ಕಾರ ಹಗಲಿರುಳು ಶ್ರಮಿಸಿದೆ. ಇದರ ಪರಿಣಾಮ ಮಹಿಳೆಯರು ಸುರಕ್ಷಿತ ಮತ್ತು ಸುಭದ್ರರಾಗಿದ್ದಾರೆ' ಎಂದು ಮೋದಿ ಹೇಳಿದರು.

ಹೆಚ್ಚುವರಿಯಾಗಿ ₹ 2ಲಕ್ಷ ನೆರವು:

'ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆ'ಯಡಿ 75 ಲಕ್ಷ ಫಲಾನುಭವಿ ಮಹಿಳೆಯರಿಗೆ ಹೆಚ್ಚುವರಿಯಾಗಿ ತಲಾ ₹ 2 ಲಕ್ಷ ನೆರವು ದೊರೆಯಲಿದೆ. ಜತೆಗೆ ಉದ್ಯಮಶೀಲತಾ ಕೌಶಲ ಸುಧಾರಣೆಗೆ ಅಗತ್ಯ ತರಬೇತಿ ಸಹ ಸಿಗಲಿದೆ ಎಂದು ಪ್ರಧಾನಿ ವಿವರಿಸಿದರು.

'ಯಾವುದೇ ಸಹೋದರಿ ಅಥವಾ ಮಗಳು ಉದ್ಯೋಗ ಪಡೆದಾಗ ಅಥವಾ ಸ್ವಯಂ ಉದ್ಯೋಗಿಗಳಾದಾಗ ಅವರ ಕನಸುಗಳಿಗೆ ಹೊಸ ರೆಕ್ಕೆಗಳು ಬರುತ್ತವೆ. ಸಮಾಜದಲ್ಲಿ ಅವರ ಗೌರವ ಇನ್ನಷ್ಟು ಹೆಚ್ಚಾಗುತ್ತದೆ' ಎಂದ ಪ್ರಧಾನಿ ಅವರು, ಹೊಸ ಯೋಜನೆಯನ್ನು ಶ್ಲಾಘಿಸಿದರು. ಮಹಿಳೆಯರ ಏಳಿಗೆಗೆ ಈ ಯೋಜನೆ ಜಾರಿಗೊಳಿಸುವ ಮೂಲಕ ನಿತೀಶ್‌ ಅವರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ದೇಶದಲ್ಲಿ 3 ಕೋಟಿ 'ಲಖ್ಪತಿ ದೀದಿ'ಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ವಿವಿಧ ಯೋಜನೆಗಳ ಲಾಭ ಪಡೆದು ಇಲ್ಲಿಯವರೆಗೆ 2 ಕೋಟಿ ಸಹೋದರಿಯರು ಲಕ್ಷಾಧಿಪತಿಗಳಾಗಿದ್ದಾರೆ. ಅವರ ಕಠಿಣ ಪರಿಶ್ರಮದಿಂದಾಗಿ ಗ್ರಾಮಗಳು, ಸಮಾಜ ಮತ್ತು ಅವರ ಕುಟುಂಬಗಳ ಗೌರವ ಹೆಚ್ಚಾಗಿದೆ. ಬಿಹಾರದಲ್ಲಿ ಜಾರಿಗೊಳಿಸಿರುವ ಹೊಸ ಯೋಜನೆಗಳಿಂದಾಗಿ ಗರಿಷ್ಠ ಸಂಖ್ಯೆಯ ಲಖ್ಪತಿ ದೀದಿಗಳು ಹೊರಹೊಮ್ಮಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಇಬ್ಬರು ಸಹೋದರರು:

'ಬಿಹಾರದ ಮಹಿಳೆಯರಿಗೆ ನಿತೀಶ್‌ ಮತ್ತು ಮೋದಿ ಇಬ್ಬರು ಸಹೋದರರಿದ್ದಾರೆ. ನಿಮ್ಮ ಒಳಿತಿಗಾಗಿ ನಾವು ಅವಿರತವಾಗಿ ದುಡಿಯುತ್ತಿದ್ದೇವೆ. ಡಬಲ್‌ ಎಂಜಿನ್‌ ಸರ್ಕಾರ ರಾಜ್ಯದ ತಾಯಂದಿರು, ಸಹೋದರಿಯರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ' ಎಂದು ಹೇಳಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಮತ್ತು ಇತರ ಸಚಿವರು ಪಟ್ನಾದಿಂದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ವರ್ಚುವಲ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries