ಕಾಸರಗೋಡು: ಜಾತಿ ಸಂಘಟನೆಗಳಿಗೆ ಹೆಚ್ಚಿನ ಮಹತ್ವ ನೀಡದೆ, ಸಮಸ್ತ ಹಿಂದೂ ಸಮಾಜದ ಅಭ್ಯುದಯಕ್ಕೆ ಪ್ರತಿಯೊಬ್ಬ ಶ್ರಮಿಸಬೇಕಾದ ಅನಿವಾರ್ಯತೆ ಇದೆ ಎಂಬುದಾಗಿ ಶ್ರೇಷ್ಠ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಅವರು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ 70ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ 'ಸಪ್ತತಿ ಮಹೋತ್ಸವ'ದ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ಧಾರ್ಮಿಕ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. ಸಮಸ್ತ ಹಿಂದೂ ಸಮಾಜವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕ್ ಅವರು ಆರಂಭಿಸಿದ ಗಣೇಶೋತ್ಸವ, ಹಿಂದೂ ಸಮಾಜದಲ್ಲಿ ಜಾಗೃತಿಗೆ ಕಾರಣವಾಗಿರುವುದರ ಜತೆಗೆ ಶಿವಾಜಿ ಉತ್ಸವ, ಸವದೇಶಿ ಆಂದೋಲನಗಳಿಗೆ ಪ್ರೇರಣೆಯನ್ನು ನೀಡಿದೆ. ಭಾರತದ ದೂರದರ್ಶಿತ್ವದಿಂದ ಇಂದು ವಿಶ್ವಗುರುವಿನ ಸ್ಥಾನದತ್ತ ಸಾಗುತ್ತಿದ್ದು, ದೇಶದ ಬೆಳವಣಿಗೆಯೂ ವಿಶ್ವ ನಾಯಕರ ಗಮನಸೆಳೆಯುವಂತಾಗಿದೆ. ದೇಶ ಇಂದು ತನ್ನ ಗತವೈಭವದತ್ತ ಮರಳುತ್ತಿದೆ ಎಂದು ತಿಳಿಸಿದರು.
ಮಹಿಳಾ ಸಮಿತಿ ಅಧ್ಯಕ್ಷೆ ವೀಣಾ ಅರುಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥೀ ಮುರುಳ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದೂ ಸಂಸ್ಕøತಿ, ಸಂಸ್ಕಾರದ ಉಳಿಸಿ, ಬೆಳೆಸಲು ಯುವಜನತೆ ಮುಂದಗಬೇಕು. ಇದಕ್ಕಾಗಿ ಸಂಘಟಿತ ಪರಿಶ್ರಮ ಅಗತ್ಯ ಎಂದು ತಿಳಿಸಿದರು. ಕಾಸರಗೋಡು ನಗರಸಭಾ ಸದಸ್ಯೆಯರಾದ ಸವಿತಾ ಟೀಚರ್, ಉಮಾ ಕಡಪ್ಪುರ, ಸಪ್ತತಿ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಮೀರಾ ಕಾಮತ್, ಡಾ. ಪೂರ್ಣಿಮಾ ಬೆಂಗಳೂರು, ಚಂದ್ರಮತಿ ಶೆಣೈ ಕಾಸರಗೋಡು ಉಪಸ್ಥಿತರಿದ್ದರು. ಉಷಾ ಸುರೇಶ್ ಸ್ವಾಗತಿಸಿದರು. ಸುರೇಖಾ ವಂದಿಸಿದರು.





