ಕಾಸರಗೋಡು: ನೀಲೇಶ್ವರಂ ಬ್ಲಾಕ್ ಪಂಚಾಯತ್ ಪ್ರಾರಂಭಿಸಿ ಜಾರಿಗೆ ತಂದಿರುವ ವಿವಿಧ ಚಟುವಟಿಕೆಗಳು ಗಮನಾರ್ಹ ಮತ್ತು ಶ್ಲಾಘನೀಯ ಎಂದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ.
ನೀಲೇಶ್ವರ ಬ್ಲಾಕ್ ಪಂಚಾಯತ್‍ನ ಕರುವಾಚೇರಿ ಮಹಿಳಾ ಮಾರುಕಟ್ಟೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಕೇಂದ್ರ ತಲೆಯೆತ್ತುವ ಮೂಲಕ ಬ್ಲಾಕ್ ಪಂಚಾಯಿತಿಯ ಸ್ವಂತ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ನೀಲೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಎಂಜಿನಿಯರ್ ಸುನೀಲ್ ಕುಮಾರ್ ವರದಿಮಂಡಿಸಿದರು. ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಮಹಮ್ಮದ್ ರಫಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸುಮೇಶ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಿಲಕುಮಾರ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ವಿ. ಸುನಿತಾ, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಸದಸ್ಯ ಟಿ.ಎಸ್. ನಜೀಬ್, ನೀಲೇಶ್ವರ ನಗರಸಭಾ ಕೌನ್ಸಿಲರ್ ಕೆ. ಮೋಹನನ್, ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಟಿ. ರಾಕೇಶ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ನೀಲೇಶ್ವರಂ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಪಿ.ಕೆ. ಲಕ್ಷ್ಮಿ ಸ್ವಾಗತಿಸಿದರು. ವಿಸ್ತರಣಾಧಿಕಾರಿ ಮಿನಿಜಾ ವಂದಿಸಿದರು.
2024-25 ಮತ್ತು 2025-26ನೇ ಹಣಕಾಸು ವರ್ಷದ ಯೋಜನೆಯಲ್ಲಿ ಕರುವಾಚೇರಿಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ಮಾರುಕಟ್ಟೆ ಕೇಂದ್ರದಲ್ಲಿ ವಿಶಾಲವಾದ ಕ್ಯಾಂಟೀನ್ ಸೌಲಭ್ಯವನ್ನು ಒದಗಿಸಲಾಗಿದೆ. ಎರಡು ಅಂತಸ್ತಿನ ಕಟ್ಟಡವು ನೆಲ ಮಹಡಿಯಲ್ಲಿ ಎರಡು ಶೌಚಗೃಹ ಅಲ್ಲದೆ, ಸುಸಜ್ಜಿತ ಪಾಕಿರ್ಂಗ್ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ.


