ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ಡಿವೈಡರ್ ಒಡೆದು ಹಾಕಿದ ಆರೋಪದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಅನಿಲ್ ಅಕ್ಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಲೋಕೊಪಯೋಗಿ ಇಲಾಖೆಯ ರಸ್ತೆ ಕಾಮಗಾರಿ ಕಾರ್ಯವನ್ನು ನಿರ್ವಹಿಸುತ್ತಿರುವ ಇಕೆಕೆ ಇನ್ಫ್ರಾಸ್ಟ್ರಕ್ಚರ್ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಘಟನೆಯಿಂದ 19,160ರೂ.ನಷ್ಟವಾಗಿದೆ. ಸಾರ್ವಜನಿಕ ಆಸ್ತಿಯನ್ನು ನಾಶಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ತ್ರಿಶೂರ್-ಕುಟ್ಟಿಪ್ಪುರಂ ರಾಜ್ಯ ಹೆದ್ದಾರಿಯ ಮುತ್ತುವರ ಶ್ರೀ ಮಹಾದೇವ ದೇವಸ್ಥಾನದ ಬಳಿ ನಡೆಯುತ್ತಿರುವ ರಸ್ತೆ ಪುನರ್ ನಿರ್ಮಾಣದ ಭಾಗವಾಗಿ ಲೋಕೋಪಯೋಗಿ ಇಲಾಖೆಯು ಯು-ಟರ್ನ್ ಅನ್ನು ಮುಚ್ಚಿತ್ತು.
ಇದರಿಂದ ಭಕ್ತರಿಗೆ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅನಿಲ್ ಅಕ್ಕರ ಸ್ಥಳಕ್ಕೆ ತೆರಳಿ ಕಾರ್ಮಿಕರಿಂದ ಸುತ್ತಿಗೆಯನ್ನು ತೆಗೆದುಕೊಂಡು, ಹೊಸದಾಗಿ ನಿರ್ಮಿಸಿದ ರಸ್ತೆ ವಿಭಜಕವನ್ನು ಒಡೆದು ಹಾಕಿದ್ದಾರೆ. ವಿಭಜಕದಿಂದ ತ್ರಿಶೂರ್‌ನಿಂದ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ತೀವ್ರ ಅನಾನುಕೂಲತೆ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ.




