ಕೋಲ್ಕತಾ : ಇತ್ತೀಚಿನ ದಿನಗಳಲ್ಲಿ ಅನಿಶ್ಚಿತ ಜಗತ್ತಿನಲ್ಲಿ ರಾಜಕೀಯವು ಅರ್ಥಶಾಸ್ತ್ರದ ವಿರುದ್ಧ ಹೆಚ್ಚೆಚ್ಚು ಮೇಲುಗೈ ಸಾಧಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಪ್ರಸಕ್ತ ವ್ಯಾಪಾರ ಉದ್ವಿಗ್ನತೆಗಳ ನಡುವೆ ಅಮೆರಿಕವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಶನಿವಾರ ಐಐಎಂ-ಕಲ್ಕತ್ತಾದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಎಸ್.ಜೈಶಂಕರ್,ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತದ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸುವುದರ ಮಹತ್ವವನ್ನು ಒತ್ತಿ ಹೇಳಿದರು.
'ರಾಜಕೀಯವು ಆರ್ಥಿಕತೆಯ ವಿರುದ್ಧ ಹೆಚ್ಚೆಚ್ಚು ಮೇಲುಗೈಯನ್ನು ಸಾಧಿಸುತ್ತಿದೆ. ಇದು ಶ್ಲೇಷೆಯಲ್ಲ. ಅನಿಶ್ಚಿತ ಜಗತ್ತಿನಲ್ಲಿ ನಮ್ಮ ರಾಷ್ಟ್ರೀಯ ಅಗತ್ಯಗಳನ್ನು ಖಚಿತಪಡಿಸಿಕೊಳ್ಳಲು ನಾವು ಪೂರೈಕೆ ಮೂಲಗಳನ್ನು ನಿರಂತರವಾಗಿ ವೈವಿಧ್ಯಗೊಳಿಸುವುದು ಹೆಚ್ಚು ಮುಖ್ಯವಾಗಿದೆ' ಎಂದು ಹೇಳಿದರು.
ಇತ್ತೀಚಿನ ವ್ಯಾಪಾರ ವಿವಾದಗಳು ಮತ್ತು ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಆಮದುಗಳ ಮೇಲೆ ಹೇರಿರುವ ಶೇ.50ರಷ್ಟು ದರ ಸೇರಿದಂತೆ ಅಮೆರಿಕದ ಭಾರೀ ಸುಂಕಗಳ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಹೇಳಿಕೆಗಳು ಹೊರಬಿದ್ದಿವೆ.
ಭಾರತ ಮತ್ತು ಅಮೆರಿಕ ಪ್ರಸ್ತುತ ಎರಡು ಸಮಾನಾಂತರ ಮಾರ್ಗಗಳ ಕುರಿತು ಚರ್ಚಿಸುತ್ತಿವೆ; ಒಂದು ಸುಂಕ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಇನ್ನೊಂದು ಸಮಗ್ರ ವ್ಥಾಪಾರ ಒಪ್ಪಂದವನ್ನು ಸಾಧಿಸುವುದು. ಉಭಯ ದೇಶಗಳು ವ್ಯಾಪಾರ ಪ್ರಮಾಣವನ್ನು ಹೆಚ್ಚಿಸುವ ಮತ್ತು ದೀರ್ಘಕಾಲದ ಮಾರುಕಟ್ಟೆ ಪ್ರವೇಶ ಅಡೆತಡೆಗಳನ್ನು ನಿವಾರಿಸುವ ಆಶಯವನ್ನು ಹೊಂದಿವೆಯಾದರೂ ಉದ್ವಿಗ್ನತೆಗಳು ಮುಂದುವರಿದಿವೆ. ಆದಾಗ್ಯೂ ಇತ್ತೀಚಿನ ದತ್ತಾಂಶಗಳು ಅಮೆರಿಕ್ಕೆ ಭಾರತದ ರಫ್ತುಗಳು ನಿರೀಕ್ಷೆಗಿಂತ ಕಡಿಮೆಯಾಗಿರುವುದನ್ನು ತೋರಿಸಿವೆ.
ಭಾರತವು ಅಮೆರಿಕದ ಶೇ.50 ಸುಂಕಗಳ ಕೆಟ್ಟ ಪರಿಣಾಮವನ್ನು ತಪ್ಪಿಸಿದೆ ಮತ್ತು ಹೆಚ್ಚು ಅನುಕೂಲಕರ ಒಪ್ಪಂದಕ್ಕಾಗಿ ಕಾಯಲು ಸಿದ್ಧವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಈಗಿನ 191 ಶತಕೋಟಿ ಡಾ.ಗಳಿಂದ 500 ಶತಕೋಟಿ ಡಾ.ಗಳಿಗೆ ಹೆಚ್ಚಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಶ್ರಮಿಸುತ್ತಿವೆ.
ಇತರ ಪ್ರಮುಖ ಆರ್ಥಿಕತೆಗಳ ನಡವಳಿಕೆಯನ್ನೂ ಉಲ್ಲೇಖಿಸಿದ ಜೈಶಂಕರ್, ಚೀನಾ ಸುದೀರ್ಘ ಕಾಲದಿಂದಲೂ ತನ್ನದೇ ಆದ ನಿಯಮಗಳಿಗೆ ಅಂಟಿಕೊಂಡಿದೆ ಮತ್ತು ಅದನ್ನು ಮುಂದುವರಿಸಿದೆ. ಇದು ಭಿನ್ನಗೊಂಡಿರುವ ಜಾಗತಿಕ ಚಿತ್ರಣಕ್ಕೆ ಕೊಡುಗೆಯನ್ನು ನೀಡುತ್ತಿದೆ ಎಂದರು.
ಈ ಅನಿಶ್ಚಿತತೆಯು ಅನೇಕ ದೇಶಗಳು ತಮ್ಮ ಕಾರ್ಯತಂತ್ರಗಳನ್ನು ರಕ್ಷಿಸಿಕೊಳ್ಳಲು ಕಾರಣವಾಗಿದೆ ಎಂದ ಜೈಶಂಕರ್, ಜಾಗತೀಕರಣ, ವಿಘಟನೆ ಮತ್ತು ಪೂರೈಕೆ ಅಭದ್ರತೆಯ ಒತ್ತಡಗಳು ಎದುರಾಗಿರುವಾಗ ಜಗತ್ತಿನ ಉಳಿದ ಭಾಗವು ಎಲ್ಲ ಅನಿರೀಕ್ಷಿತ ಪರಿಸ್ಥಿತಿಗಳ ವಿರುದ್ಧ ರಕ್ಷಿಸಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು.
ಸ್ವಾವಲಂಬನೆ ಮತ್ತು ಸುಭದ್ರ ಕೈಗಾರಿಕಾ ಬುನಾದಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನವನ್ನು ಒತ್ತಿ ಹೇಳಿದ ಜೈಶಂಕರ್, ಭಾರತವು ಆತ್ಮ ನಿರ್ಭರತೆಯ ಗುರಿಯನ್ನು ಸಕ್ರಿಯವಾಗಿ ಅನುಸರಿಸುತ್ತಿದೆ ಮತ್ತು ತನ್ನನ್ನು ಕೈಗಾರಿಕೆಗಳಿಗೆ ಉತ್ಪಾದನಾ ನೆಲೆಯನ್ನಾಗಿ ರೂಪಿಸಿಕೊಳ್ಳುತ್ತಿದೆ. ಮೂಲಸೌಕರ್ಯ ಮತ್ತು ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳಲ್ಲಿ ದಾಪುಗಾಲು ಹಾಕುತ್ತಿದೆ. ಭಾರತವು ಸಾರಿಗೆ, ಇಂಧನ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಪ್ರಮುಖ ಸುಧಾರಣೆಗಳ ಮೂಲಕ ಮೂಲಸೌಕರ್ಯ ಅಂತರಗಳನ್ನು ಕಡಿಮೆಗೊಳಿಸುತ್ತಿದೆ ಎಂದು ಹೇಳಿದರು.




