HEALTH TIPS

ಮೇಗಿನಡ್ಕದಲ್ಲಿ ಡಾ.ಎಸ್.ಎಲ್.ಭೈರಪ್ಪ ಸ್ಮರಣಾಂಜಲಿ

ಬದಿಯಡ್ಕ: ವಾಸ್ತವವಾದಿ ಹಿನ್ನೆಲೆಯ ಕಾದಂಬರಿಗಳನ್ನು ತೆರೆದಿಟ್ಟ ಮಹಾನ್ ಬರಹಗಾರರಾದ ಡಾ.ಎಸ್.ಎಲ್.ಭೈರಪ್ಪ ಅವರ ಅಗಲುವಿಕೆ ತುಂಬಲಾರದ ನಷ್ಟವಾಗಿಯೇ ಕಾಡುತ್ತಿದೆ. ನಮ್ಮ ದೈನಂದಿನ ಸಾಮಾನ್ಯ ಬದುಕಿನ ಆಗುಹೋಗುಗಳನ್ನು, ಅಂತರಂಗದೊಳಗಿನ ಧ್ವನಿಗಳನ್ನು ಗುರುತಿಸಿ, ಹೆಕ್ಕಿ ಅವರು ಕಟ್ಟಿಕೊಟ್ಟ ಕಾದಂಬರಿ ಪ್ರಪಂಚ ಅತ್ಯುಚ್ಛ ಮಟ್ಟದಲ್ಲಿ ಜನಾಕರ್ಷಣೆಗೆ ಕಾರಣವಾಯಿತು ಎಂದು ನಿವೃತ್ತ ಉಪನ್ಯಾಸಕ ಡಾ.ವರದರಾಜ ಚಂದ್ರಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನ್ಯ ಸಮೀಪದ ಮೇಗಿನಡ್ಕ ಅಕ್ಕಮ್ಮ ನಿಲಯದಲ್ಲಿ ಭಾನುವಾರ ಅಪರಾಹ್ನ ನಡೆದ ಡಾ.ಎಸ್.ಎಲ್.ಭೈರಪ್ಪ ಸ್ಮರಣಾಂಜಲಿ ಸಮಾರಂಭದಲ್ಲಿ ಭೈರಪ್ಪನವರ ಬದುಕಿನ ಬಗ್ಗೆ ವಿಶೇಷೋಪನ್ಯಾಸಗೈದು ಅವರು ಮಾತನಾಡಿದರು. 


ಬದುಕಿನ ಹೆಪ್ಪುಗಟ್ಟಿದ ಅನುಭವವೇ ಗಟ್ಟಿಯಾದ ಬರಹಗಳನ್ನು ಬರೆಯಲು ಅವರಿಗೆ ಪ್ರೇರೇಪಣೆಯಾಯಿತು. ವಾಸ್ತವವಾದಿ ಹಿನ್ನೆಲೆಯ ಅವರ ಬರಹಗಳು ಕನ್ನಡದಲ್ಲಿ ದೊಡ್ಡ ಓದುಗ ಕೇಂದ್ರಿತ ಕ್ರಾಂತಿಯನ್ನು ಸೃಷ್ಟಿಸಿತು. ನಮ್ಮ ಬದುಕಿಗೆ ಹತ್ತಿರವಾಗುವ ಅವರ ಬರವಣಿಗೆ ಅಚ್ಚಳಿಯದ ಪ್ರಭಾವ ಪ್ರತಿಯೊಬ್ಬ ಓದುಗನಿಗೂ ನೀಡುವಲ್ಲಿ ಸಾಫಲ್ಯಗೊಂಡಿದೆ ಎಂದವರು ನೆನಪಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಭೈರಪ್ಪನವರ ಬರಹಗಳ ಬಗ್ಗೆ ಕರ್ನಾಟಕ ಪುಸ್ತಕ ಪ್ರಾಧಿಕಾರದ ಮಾಜಿ ಸದಸ್ಯ, ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ಅವರು ಮಾತನಾಡಿ, ಭೈರಪ್ಪನವರ ಕೃತಿಗಳಲ್ಲಿ ಬಹುತೇಕೆಡೆಗಳಲ್ಲಿ ಪರಿಶುದ್ಧತೆಯ ಹುಡುಕಾಟದ ಹೂರಣಗಳು ಅಚ್ಚರಿಗೊಳಿಸುತ್ತದೆ. ಸ್ತ್ರೀ ಪ್ರತಿಭಟನೆ, ಧರ್ಮ, ಪುರುಷಾರ್ಥಗಳ ಹುಡುಕಾಟಗಳೂ ಅವರ ಕೃತಿಗಳಲ್ಲಿ ಕಡೆದುನಿಂತಿದೆ. ಇರವು, ಅರಿವು, ಆನಂದದ ಆಚೆಗೆ ಭಾರತೀಯ ಪರಂಪರೆಯ ಹಿನ್ನೆಲೆಯಲ್ಲಿ ವೇದಾಂತ ದೃಷ್ಟಿಯ ಕಥಾ ನಿರೂಪಣೆ ಅಸಾಮಾನ್ಯತೆಯನ್ನು ಸೃಷ್ಟಿಸಿದೆ. ಯಾವುದೇ ಇಸಂಗಳಿಗೆ ಒಡಂಬದ ಅವರು ತಮ್ಮದೇ ಹಾದಿಯಲ್ಲಿ ಸಾಗಿದವರು. ಹಲವು ಸಂದರ್ಭಗಳಲ್ಲಿ ಟೀಕೆ, ವಾಗ್ಯುದ್ಧಗಳಿಗೆ ಕಾರಣವಾದ ಅವರ ಕೃತಿಗಳ ಮರು ಓದು ಹೊಸ ದೃಷ್ಟಿಗೆ ತೆರೆದುಕೊಳ್ಳುತ್ತದೆ ಎಂದವರು ವಿಶ್ಲೇಷಿಸಿದರು.

ಡಾ.ಭೈರಪ್ಪ ಅವರ ಒಡನಾಡಿ, ಡಾ.ಮನೋಹರ ರಾವ್.ಕೆ.ಜಿ.ಅಧ್ಯಕ್ಷತೆ ವಹಿಸಿ ಮಾತನಾಡಿ, ಭೈರಪ್ಪನವರು ಗಂಭೀರ ವ್ಯಕ್ತಿತ್ವದವರಾಗಿದ್ದರೂ ಅಂತರಂಗದಲ್ಲಿ ಮಕ್ಕಳಮನಸ್ಸಿನಷ್ಟು ಮೃದು ಹೃದಯಿಗಳಾಗಿದ್ದರು. ಮನುಷ್ಯ ಸ್ನೇಹ, ಆರ್ತರ ಬಗೆಗಿನ ಮರುಗುವಿಕೆ ಅವರ ವ್ಯಕ್ತಿತ್ವವನ್ನು ವಿಶಾಲಗೊಳಿಸಿತು. ಅವರ ಬರಹಗಳು ಅಜರಾಮರ ಎಂದರು. 

ನಿವೃತ್ತ ಶಿಕ್ಷಕ ಕೆ.ಗೋಪಾಲಕೃಷ್ಣ ರಾವ್.ಉಪಸ್ಥಿತರಿದ್ದರು. ಕು.ವಿಭಾ ರಾವ್ ಅವರು ಭೈರಪ್ಪ ಅವರ ಪರ್ವದ ಆಯ್ದ ಭಾಗಗಳನ್ನು ವಾಚಿಸಿ, ಪ್ರಾರ್ಥನೆಗೈದರು. ಪತ್ರಕರ್ತ ಪುರುಷೋತ್ತಮ ಭಟ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಂದನ್ ನಚಿಕೇತ ರಾವ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries