ಕಾಸರಗೋಡು: ಚೆರ್ವತ್ತೂರು ಪೇಟೆಯಲ್ಲಿ ಮುಳ್ಳುಹಂದಿಯ ಚೂಪಾದ ಮುಳ್ಳೊಂದು ಬಲವಾಗಿ ಚುಚ್ಚಿಕೊಂಡ ಪರಿಣಾಮ ವಿಲವಿಲ ಒದ್ದಾಡುತ್ತಿದ್ದ ಬೀದಿ ನಾಯಿಯನ್ನು ಆಟೋ ಚಲಕರ ತಮಡವೊಂದು ರಕ್ಷಿಸಿದೆ.
ಭಾನುವಾರ ಬೆಳಗ್ಗೆ ಮೂಗಿನ ಭಾಗಕ್ಕೆ ಮುಳ್ಳುಹಂದಿಯ ಮುಳ್ಳು ಚುಚ್ಚಿಕೊಂಡು ರಕ್ತಸುರಿಯುತ್ತಿದ್ದ ಸ್ಥಿತಿಯಲ್ಲಿ ಬೀದಿ ನಾಯಿ ಕಂಡು ಬಂದಿತ್ತು. ಆಹಾರ ಸೇವಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ನಾಯಿ, ಅರಚುತ್ತಾ ಆಟೋರಿಕ್ಷಾ ನಿಲ್ದಾಣದತ್ತ ಆಗಮಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಆಟೋ ಚಾಲಕರು, ನಾಯಿಯ ಮೂಗಿನ ಭಾಗಕ್ಕೆ ಚುಚ್ಚಿದ್ದ ಮುಳ್ಳನ್ನು ಕೈಯಿಂದ ಹೊರತೆಗೆಯಲು ಯತ್ನಿಸಿದರೂ, ಇದು ಸಾಧ್ಯವಾಗದಿದ್ದಾಗ ಕಟ್ಟಿಂಗ್ ಪ್ಲೇಯರ್ ಬಳಸಿ ಮುಳ್ಳು ಹೊರ ತೆಗೆದಿದ್ದಾರೆ. ವೇದನೆಯಿಂದ ನರಳುತ್ತಿದ್ದ ನಾಯಿ, ಮುಲ್ಳು ಹೊರ ತೆಗೆಯುತ್ತಿದ್ದಂತೆ ಧನ್ಯತಾಭಾವದಿಂದ ಬಾಲ ಅಲ್ಲಾಡಿಸುತ್ತಾ ಅಲ್ಲಿಂದ ತೆರಳಿದ್ದರೂ, ಅಲ್ಪ ಹೊತ್ತಿನಲ್ಲಿ ಮತ್ತೆ ಆಟೋ ನಿಲ್ದಾಣಕ್ಕೆ ಆಗಮಿಸಿದೆ. ನಂತರ ಆಟೋ ಚಾಲಕರು ನಾಯಿಗೆ ಆಹಾರ ನೀಡಿ ಕಳುಹಿಸಿದರು.


