ಗುಲ್ಫಿಶಾ ಫಾತಿಮಾ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಇಷ್ಟು ಸುದೀರ್ಘ ಕಾಲ ವಿಚಾರಣಾಧೀನ ಕೈದಿಗಳನ್ನು ಬಂಧನದಲ್ಲಿಡುವುದು ವಿಚಾರಣಾಪೂರ್ವ ಅಪರಾಧ ನಿಗದಿಗೆ ಸಮವಾಗಲಿದೆ ಎಂದು ನ್ಯಾ. ಅರವಿಂದ್ ಕುಮಾರ್ ಹಾಗೂ ನ್ಯಾ. ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠದ ಗಮನಕ್ಕೆ ತಂದರು.
"ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವಿಡಂಬನೆಯಾಗಲಿದೆ. ಅಪರಾಧಿಗಳು ಎಂದು ಘೋಷಣೆಯಾಗುವವರೆಗೂ ಯಾರೊಬ್ಬರೂ ಈ ರೀತಿ ಶಿಕ್ಷೆಗೊಳಗಾಗಬಾರದು. ಇದು ವಿಚಾರಣಾಪೂರ್ವ ಅಪರಾಧ ನಿಗದಿಯಾಗಿದೆ" ಎಂದು ಅವರು ನ್ಯಾಯಾಲಯದೆದುರು ವಾದ ಮಂಡಿಸಿದರು.
ಇದೇ ವೇಳೆ, ಆರೋಪಿಗಳಿಗೆ ಜಾಮೀನು ನಿರಾಕರಿಸಿದ ದಿಲ್ಲಿ ನ್ಯಾಯಾಲಯದ ಆದೇಶದ ವಿರುದ್ಧ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಅಭಿಷೇಕ್ ಮನು ಸಿಂಘ್ವಿ, ಅವಸರದ ವಿಚಾರಣೆಯು ಆರೋಪಿಗಳ ಪಾಲಿಗೆ ಮಾರಕವಾಗಲಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ದಿಲ್ಲಿ ನ್ಯಾಯಾಲಯದ ಆದೇಶವನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಕುಖ್ಯಾತ ತೀರ್ಪಿನೊಂದಿಗೆ ಅವರು ಹೋಲಿಕೆ ಮಾಡಿದರು.
"ನಾನು ವಿಚಾರಣೆ ವಿಳಂಬಗೊಳ್ಳಲು ಜವಾಬ್ದಾರನಲ್ಲ. ಪದೇ ಪದೇ ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸುತ್ತಿರುವ ಪೊಲೀಸರನ್ನು ಈ ವಿಳಂಬಕ್ಕೆ ಹೊಣೆಗಾರರನ್ನಾಗಿಸಬಹುದು" ಎಂದು ಮತ್ತೊಬ್ಬ ಆರೋಪಿ ಉಮರ್ ಖಾಲಿದ್ ನ್ಯಾಯಾಲಯದೆದುರು ವಾದ ಮಂಡಿಸಿದರು.
2020ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಗಲಭೆಗಳು ನಡೆಯಲು ದೊಡ್ಡ ಮಟ್ಟದ ಪಿತೂರಿ ನಡೆಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿ, ವಿಚಾರಣಾಧೀನ ಕೈದಿಗಳಾಗಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಂ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಾಬಾದ್ ಅಹ್ಮದ್ ಹಾಗೂ ಮುಹಮ್ಮದ್ ಸಲೀಮ್ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.




