ಪೆರ್ಲ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲಕರ ಅವಕಾಶಗಳಿವೆ. ಆಟದಲ್ಲಿ ಸಮಯ ಕಳೆಯುವ ಬದಲು ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮಕ್ಕಳ ಬೆಳವಣಿಗೆಗೆ ತುಂಬಾ ಪ್ರಯೋಜನವಾಗಲಿದೆ. ಮಕ್ಕಳ ಸಂಭಾಷಣೆ, ಉಚ್ಚಾರ ಸ್ಪಷ್ಟತೆ, ಸೃಜನ ಶೀಲತೆ ಬೆಳೆಸಿಕೊಳ್ಳಲು ರಂಗಭೂಮಿ ಉತ್ತಮ ವೇದಿಕೆಯಾಗಿದೆ. ಬಾಲ್ಯದಲ್ಲಿ ಮಕ್ಕಳ ನೈಜ ಕ್ರಿಯಾತ್ಮಕತೆ ಹುಡುಕಿ ರಂಗಭೂಮಿಯ ವಿಶಾಲ ಅವಕಾಶವನ್ನು ಪರಿಚಯಿಸುವ ಸಂಡೇ ಡ್ರಾಮಾ ಥಿಯೇಟರ್ ಚಟುವಟಿಕೆ ಅಭಿನಂದನೀಯ ಎಂದು ಸಾಹಿತಿ ಅಕ್ಷತಾ ರಾಜ್ ಪೆರ್ಲ ಹೇಳಿದರು.
ಸ್ವರ್ಗದ ಎಂ.ಕೆ.ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಭಾನುವಾರ ಮಕ್ಕಳ ಸಂಡೇ ಡ್ರಾಮಾ ಥಿಯೇಟರ್ ಉದ್ಘಾಟಿಸಿ ಮಾತನಾಡಿದರು.
ಸ್ವರ್ಗ ಶಾಲಾ ಶಿಕ್ಷಕಿ ಗೀತಾಂಜಲಿ ಮಾತನಾಡಿ, ಮಕ್ಕಳ ಕಲ್ಪನಾಶಕ್ತಿ, ಬೌದ್ಧಿಕ ಬೆಳವಣಿಗೆ, ಆತ್ಮವಿಶ್ವಾಸ ಮತ್ತು ಸಾಮಾಜಿಕ, ಸಂವಹನ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಭೂಮಿಕಾ ಥಿಯೇಟರ್ ಸೃಜನಶೀಲ ವೇದಿಕೆಯಾಗಿದೆ. ಹಳ್ಳಿಯ ಎಲ್ಲ ಮರಿ ಕಲಾವಿದರು ಥಿಯೇಟರ್ ಮೂಲಕ ಪಳಗಿ ಕಲಾಕ್ಷೇತ್ರದಲ್ಲಿ ಬೆಳಗಲಿ ಎಂದು ಹಾರೈಸಿದರು.
ಎಣ್ಮಕಜೆ ಗ್ರಾಪಂ ಸದಸ್ಯ ರಾಮಚಂದ್ರ ಎಂ. ಶುಭ ಹಾರೈಸಿದರು. ಅಜಿತ್ ಸ್ವರ್ಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಮಯ ನಿಷ್ಠೆ ಹಾಗೂ ಬದ್ಧತೆಯಿಂದ ನಮ್ಮನ್ನು ನಾವು ತೊಡಗಿಸಿಕೊಂಡರೆ ಸಾಧನೆ ಮಾಡಬಹುದು. ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಸಮಾಜದ ಹಿತಾಸಕ್ತಿಯಿಂದ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಅದು ಸಮಾಜಕ್ಕೆ ನಾವು ಕೊಡುವ ಉದಾತ್ತ ಕೊಡುಗೆಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ರಂಗ ನಿರ್ದೇಶಕ ಉದಯ ಸಾರಂಗ್, ಕೃಷ್ಣ ಮೋಹನ ಪೆÇಸೊಳ್ಯ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಮಾತೃಭೂಮಿ ಸ್ವರ್ಗ ಅಧ್ಯಕ್ಷ ಮಹೇಶ್ ಕೆ., ಗ್ರಂಥಾಲಯ ಕಾರ್ಯದರ್ಶಿ ರವಿ ವಾಣೀನಗರ ಉಪಸ್ಥಿತರಿದ್ದರು.
ಶ್ರೀನಿವಾಸ ಪೆರಿಕ್ಕಾನ ಸ್ವಾಗತಿಸಿ ನಿರೂಪಿಸಿದರು. ಶಶಿಕಲಾ ಕೆ.ವಂದಿಸಿದರು. ಜ.31ರಂದು ಸ್ವರ್ಗ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳ ಚೊಚ್ಚಲ ನಾಟಕ ಪ್ರದರ್ಶನಗೊಳ್ಳಲಿದೆ. ಬಳಿಕ ನಾರಂಪಾಡಿ, ಸುಳ್ಯದಲ್ಲೂ ಮಕ್ಕಳು ರಂಗಭೂಮಿ ಪ್ರದರ್ಶನ ನೀಡುವರು.

.jpg)
