ಕೊಲಂಬೊ: 2019ರ ಈಸ್ಟರ್ ರವಿವಾರದ ಭೀಕರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಲಾಗಿದೆ. ದಾಳಿಗೆ ಪಿತೂರಿ ರೂಪಿಸಿದ್ದು ಹಾಗೂ ಸಹಕಾರ ನೀಡಿದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ ಎಂದು aljazeera ವರದಿ ಮಾಡಿದೆ.
2019ರ ಏಪ್ರಿಲ್ ನಲ್ಲಿ ನಡೆದ ಈ ದಾಳಿಯಲ್ಲಿ 279 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 45 ವಿದೇಶಿ ಪ್ರಜೆಗಳೂ ಸೇರಿದ್ದರು. ದಾಳಿಯ ಪರಿಣಾಮವಾಗಿ ದೇಶದ ಪ್ರವಾಸೋದ್ಯಮ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತ್ತು.
ರಾಜಧಾನಿ ಕೊಲಂಬೊ ಉಪನಗರದಲ್ಲಿ ಸಲ್ಲೇ ಅವರನ್ನು ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. "ಈಸ್ಟರ್ ರವಿವಾರದ ದಾಳಿಗೆ ಪಿತೂರಿ ಹಾಗೂ ಸಹಕಾರ ನೀಡಿದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ" ಎಂದು ತನಿಖಾ ಅಧಿಕಾರಿಯೊಬ್ಬರು AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಗೋಟಬಯ ರಾಜಪಕ್ಸೆ ಅಧ್ಯಕ್ಷರಾದ ನಂತರ 2019ರಲ್ಲಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥರಾಗಿ ಬಡ್ತಿ ಪಡೆದಿದ್ದ ಸಲ್ಲೇ, ಸಂಘಟಿತ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದರೆ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ.
ಈಸ್ಟರ್ ದಿನ ಬೆಳಿಗ್ಗೆ ಪ್ರಾರ್ಥನಾ ಸಭೆಗಳ ವೇಳೆ ಮೂರು ಚರ್ಚ್ಗಳಲ್ಲಿ ಹಾಗೂ ಉಪಾಹಾರದ ಸಮಯದಲ್ಲಿ ಮೂರು ಐಷಾರಾಮಿ ಹೋಟೆಲ್ ಗಳಲ್ಲಿ ಏಕಕಾಲದಲ್ಲಿ ಆರು ಆತ್ಮಹತ್ಯಾ ಬಾಂಬ್ ಸ್ಫೋಟಗಳು ನಡೆದಿದ್ದವು. ಈ ದಾಳಿಗಳು ದೇಶದ ಪ್ರಮುಖ ಪ್ರವಾಸೋದ್ಯಮ ವಲಯವನ್ನು ಸಂಕಷ್ಟಕ್ಕೆ ತಳ್ಳಿದ್ದವು.
ಆರಂಭದಲ್ಲಿ ಆತ್ಮಹತ್ಯಾ ದಾಳಿಗಳಿಗೆ ಸ್ಥಳೀಯ ಸಶಸ್ತ್ರ ಗುಂಪನ್ನು ಅಧಿಕಾರಿಗಳು ಹೊಣೆಗಾರರನ್ನಾಗಿ ಘೋಷಿಸಿದ್ದರು. ಆದರೆ ನಂತರ ಸಲ್ಲೇ ಅವರ ಮೇಲೂ ದಾಳಿ ಮಾಡಿದ ಆರೋಪಗಳು ಕೇಳಿಬಂದವು.
2023ರಲ್ಲಿ ಬ್ರಿಟಿಷ್ ಚಾನೆಲ್ 4 ಪ್ರಕಟಿಸಿದ ವರದಿಯಲ್ಲಿ ಸಲ್ಲೇ ದಾಳಿಕೋರರೊಂದಿಗೆ ಸಂಪರ್ಕ ಹೊಂದಿದ್ದು, ದಾಳಿಗೆ ಮುನ್ನ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ರಾಜಪಕ್ಸೆ ಪರವಾಗಿ ಆ ವರ್ಷದ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ದಾಳಿಗೆ ಅವಕಾಶ ನೀಡಲಾಗಿದೆ ಎಂದು ವಿಶಲ್ ಬ್ಲೋವರ್ ಒಬ್ಬರು ತಿಳಿಸಿದ್ದಾರೆ ಎಂದು ವರದಿ ಹೇಳಿತ್ತು.
ಬಾಂಬ್ ಸ್ಫೋಟಗಳ ಎರಡು ದಿನಗಳ ಬಳಿಕ ಗೋಟಬಯ ರಾಜಪಕ್ಸೆ ತಮ್ಮ ಅಧ್ಯಕ್ಷೀಯ ಉಮೇದುವಾರಿಕೆಯನ್ನು ಘೋಷಿಸಿದ್ದರು. ಹಿಂಸಾಚಾರವನ್ನು ಕಠಿಣವಾಗಿ ಹತ್ತಿಕ್ಕುವುದಾಗಿ ಭರವಸೆ ನೀಡಿದ ಅವರು, ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿದ್ದರು.
ರಾಜಪಕ್ಸೆ ವಿಜಯದ ನಂತರ ಶ್ರೀಲಂಕಾದ ಪ್ರಮುಖ ಗುಪ್ತಚರ ಸಂಸ್ಥೆಯಾದ SIS ಮುಖ್ಯಸ್ಥರಾಗಿ ಸಲ್ಲೇ ಅವರನ್ನು ನೇಮಕ ಮಾಡಲಾಗಿತ್ತು. ಆದರೆ 2024ರಲ್ಲಿ ಅನುರ ಕುಮಾರ ದಿಸಾನಾಯಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸಲ್ಲೇ ಅವರನ್ನು ವಜಾಗೊಳಿಸಲಾಯಿತು. ದಾಳಿಯ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಿಸಾನಾಯಕ ಭರವಸೆ ನೀಡಿದ್ದರು.
ಭಾರತೀಯ ಗುಪ್ತಚರ ಸಂಸ್ಥೆ ದಾಳಿ ಸನ್ನಿಹಿತವಾಗಿದೆ ಎಂಬ ಮುನ್ನೆಚ್ಚರಿಕೆ ನೀಡಿದ್ದರೂ, ಕ್ರಮ ಕೈಗೊಳ್ಳಲು ವಿಫಲವಾದ ಅಧಿಕಾರಿಗಳ ವಿರುದ್ಧ ಇತರ ತನಿಖೆಗಳು ಟೀಕೆ ವ್ಯಕ್ತಪಡಿಸಿವೆ.
2023ರಲ್ಲಿ ಶ್ರೀಲಂಕಾದ ಸುಪ್ರೀಂ ಕೋರ್ಟ್, ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಇತರ ನಾಲ್ವರು ಹಿರಿಯ ಅಧಿಕಾರಿಗಳು ಬಾಂಬ್ ಸ್ಫೋಟಗಳನ್ನು ತಪ್ಪಿಸಲು ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿತ್ತು.
ಸಿವಿಲ್ ಮೊಕದ್ದಮೆ ದಾಖಲಿಸಿದ್ದ ಸಂತ್ರಸ್ತರ ಸಂಬಂಧಿಕರಿಗೆ ಸಿರಿಸೇನಾ ವೈಯಕ್ತಿಕವಾಗಿ 100 ಮಿಲಿಯನ್ ರೂಪಾಯಿಗಳನ್ನು (ಸುಮಾರು 273,300 ಡಾಲರ್) ಪರಿಹಾರವಾಗಿ ಪಾವತಿಸಲು ನ್ಯಾಯಾಲಯ ಆದೇಶಿಸಿತ್ತು. ಆಗಿನ ಪೊಲೀಸ್ ಮುಖ್ಯಸ್ಥ, ಇಬ್ಬರು ಹಿರಿಯ ಗುಪ್ತಚರ ಅಧಿಕಾರಿಗಳು ಹಾಗೂ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಜಂಟಿಯಾಗಿ ಇನ್ನೂ 210 ಮಿಲಿಯನ್ ರೂಪಾಯಿಗಳನ್ನು (ಸುಮಾರು 574,000 ಡಾಲರ್) ಪಾವತಿಸಲು ಸೂಚಿಸಲಾಗಿತ್ತು.
ಇದೇವೇಳೆ, ಸಾರ್ವಜನಿಕರಿಂದ ತಡೆಹಿಡಿಯಲಾದ ಹಿಂದಿನ ತನಿಖೆಗಳ ಭಾಗಗಳನ್ನು ಬಹಿರಂಗಪಡಿಸುವಂತೆ ವಿಶ್ವಸಂಸ್ಥೆ ಶ್ರೀಲಂಕಾ ಸರ್ಕಾರವನ್ನು ಆಗ್ರಹಿಸಿದೆ.

