ಅಂದರೆ ಪ್ರತಿದಿನ ಸರಾಸರಿ 54 ಜನರು ಕಾಣೆಯಾಗಿದ್ದಾರೆ. ಒಟ್ಟು 509 ಮಹಿಳೆಯರು ಮತ್ತು ಹುಡುಗಿಯರು, 298 ಪುರುಷರು ದಿಲ್ಲಿಯಲ್ಲಿ ನಾಪತ್ತೆಯಾಗಿದ್ದು ಇದರಲ್ಲಿ ಇಲ್ಲಿಯವರೆಗೆ 235 ವ್ಯಕ್ತಿಗಳನ್ನು ಪತ್ತೆಹಚ್ಚಲಾಗಿದೆ. 572 ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ದಾಖಲೆಗಳು ತೋರಿಸಿವೆ.
ನಾಪತ್ತೆ ಪ್ರಕರಣಗಳಲ್ಲಿ 191 ಅಪ್ರಾಪ್ತ ವಯಸ್ಕರು ಇದ್ದಾರೆ. ಈ ಪ್ರಕರಣಗಳಲ್ಲಿ ಹೆಚ್ಚಿನ ಪಾಲು ಹುಡುಗಿಯರಾಗಿದ್ದು, 45 ಹುಡುಗರಿಗೆ ಹೋಲಿಸಿದರೆ 146 ಹುಡುಗಿಯರು ಕಾಣೆಯಾಗಿದ್ದಾರೆ. ಕಾಣೆಯಾದ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚಿನವರು ಹದಿಹರೆಯದವರಾಗಿದ್ದು, ಈ ಅವಧಿಯಲ್ಲಿ 169 ಹದಿಹರೆಯದವರು ಕಾಣೆಯಾಗಿದ್ದಾರೆ. ಅವರಲ್ಲಿ 138 ಹುಡುಗಿಯರು ಮತ್ತು 31 ಹುಡುಗರು ಇದ್ದಾರೆ. ಈ ಹದಿಹರೆಯದವರ ಪ್ರಕರಣಗಳಲ್ಲಿ ಸುಮಾರು ಶೇ. 71 ರಷ್ಟು ಇನ್ನೂ ಬಗೆಹರಿಯದೆ ಉಳಿದಿವೆ ಎಂದು ಪೊಲೀಸ್ ದತ್ತಾಂಶಗಳು ಸೂಚಿಸುತ್ತವೆ.
8 ರಿಂದ 12 ವರ್ಷ ವಯಸ್ಸಿನವರಲ್ಲಿ, 8 ಹುಡುಗರು ಮತ್ತು 5 ಹುಡುಗಿಯರು ಸೇರಿದಂತೆ 13 ಮಕ್ಕಳು ಕಾಣೆಯಾಗಿದ್ದಾರೆ. ಎಂಟು ವರ್ಷದೊಳಗಿನ 9 ಮಕ್ಕಳು ಕಾಣೆಯಾಗಿದ್ದಾರೆ. ಕಿರಿಯ ವಯಸ್ಸಿನ ಆರು ಮಕ್ಕಳನ್ನು ಮಾತ್ರ ಇಲ್ಲಿಯವರೆಗೆ ಪತ್ತೆಹಚ್ಚಲಾಗಿದೆ. ಅದೇ ಅವಧಿಯಲ್ಲಿ, 363 ಮಹಿಳೆಯರು ಮತ್ತು 253 ಪುರುಷರು ಸೇರಿದಂತೆ 616 ವಯಸ್ಕರು ಕಾಣೆಯಾಗಿದ್ದಾರೆ. ಇದರಲ್ಲಿ 181 ವಯಸ್ಕರನ್ನು ಪತ್ತೆ ಮಾಡಿದ್ದು 435 ಪ್ರಕರಣಗಳು ಬಾಕಿ ಉಳಿದಿವೆ.
2025 ರಲ್ಲಿ ಮಾತ್ರ, ದಿಲ್ಲಿಯಲ್ಲಿ 24,500 ಕ್ಕೂ ಹೆಚ್ಚು ಕಾಣೆಯಾದವರ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಮಹಿಳೆಯರೇ ಇದ್ದಾರೆ. ದಶಕದ ಡೇಟಾಗಳನ್ನು ನೋಡಿದರೆ ಕಳೆದ 10 ವರ್ಷಗಳಲ್ಲಿ ನಗರದಲ್ಲಿ ಸುಮಾರು 2.3 ಲಕ್ಷ ಜನರು ಕಾಣೆಯಾಗಿದ್ದಾರೆ. ಇದರಲ್ಲಿ ಸುಮಾರು 52,000 ಪ್ರಕರಣಗಳು ಇನ್ನೂ ಬಗೆಹರಿದಿಲ್ಲ. ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿದ್ದು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಪ್ರಕರಣಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗುತ್ತಿರುವ ಮಕ್ಕಳು
ದತ್ತಾಂಶಗಳನ್ನು ಗಮನಿಸಿದರೆ ಕಳೆದ ಮೂರು ವರ್ಷಗಳಲ್ಲಿ ಕಾಣೆಯಾದ ಜನರ ಒಟ್ಟು ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಎಂದು ತೋರಿಸುತ್ತದೆ. ಜನವರಿ 2024 ರಲ್ಲಿ 1,684 ಜನರು ಕಾಣೆಯಾಗಿದ್ದರು. 2025 ರಲ್ಲಿ 1,786 ಜನರು ಮತ್ತು ಈ ಜನವರಿಯಲ್ಲಿ 1,777 ಜನರು ಕಾಣೆಯಾಗಿದ್ದಾರೆ ಎಂದು ಡೇಟಾ ತೋರಿಸುತ್ತದೆ.
2026 ಜನವರಿಯಲ್ಲಿ 430 ಮಕ್ಕಳು ಕಾಣೆಯಾಗಿದ್ದಾರೆ. ಜನವರಿ 2025 ರಲ್ಲಿ 436 ಪ್ರಕರಣಗಳು ವರದಿಯಾಗಿತ್ತು. ಅವರಲ್ಲಿ, 383 ಮಕ್ಕಳು 12-18 ವರ್ಷ ವಯಸ್ಸಿನವರಾಗಿದ್ದು, ಪ್ರತಿ ವರ್ಷ ದಾಖಲಾಗುವ ಇಂತಹ ಪ್ರಕರಣಗಳಲ್ಲಿ ಈ ವಯಸ್ಸಿನವರ ಸಂಖ್ಯೆ ಜಾಸ್ತಿ ಇದೆ. ಈ ವಯಸ್ಸಿನ ಮಕ್ಕಳಲ್ಲಿ ಹೆಚ್ಚಿನವರು ಹುಡುಗಿಯರು. ಮನೆಯಿಂದ ಓಡಿ ಹೋಗಿರುವುದು, ಪ್ರೀತಿ-ಪ್ರೇಮ ಸಂಬಂಧಗಳು, ಮೊಬೈಲ್ ಫೋನ್‌ಗಳು, ಗ್ಯಾಜೆಟ್‌ಗಳು ಅಥವಾ ಇತರ ವೈಯಕ್ತಿಕ ಬೇಡಿಕೆಗಳನ್ನು ಪೋಷಕರು ಪೂರೈಸದೇ ಇದ್ದಾಗ ಸ್ವಯಂಪ್ರೇರಣೆಯಿಂದ ಮನೆಯಿಂದ ಓಡಿಹೋದ ಹದಿಹರೆಯದವರ ಪ್ರಕರಣಗಳೇ ಇದರಲ್ಲಿ ಹೆಚ್ಚು.
ಅಂಕಿಅಂಶಗಳ ಪ್ರಕಾರ, ಕಳ್ಳಸಾಗಣೆ ಅಥವಾ ಅಕ್ರಮ ದತ್ತು ಸ್ವೀಕಾರದ ಅಪಾಯಗಳಿಂದಾಗಿ ಹೆಚ್ಚು ದುರ್ಬಲರೆಂದು ಪರಿಗಣಿಸಲಾದ 0-8 ವರ್ಷ ವಯಸ್ಸಿನ ಗುಂಪಿನಲ್ಲಿ ಜನವರಿ 2024 ರಲ್ಲಿ 32 ಮಕ್ಕಳು, 2025 ರಲ್ಲಿ 18 ಮಕ್ಕಳು ಮತ್ತು ಈ ವರ್ಷ ಜನವರಿ 31 ರವರೆಗೆ 17 ಮಕ್ಕಳು ಕಾಣೆಯಾಗಿದ್ದಾರೆ. ಈ ವರ್ಗದಲ್ಲಿ ಪತ್ತೆಯಾಗದ ಮಕ್ಕಳ ಸಂಖ್ಯೆ 2024 ರಲ್ಲಿ 18, 2025 ರಲ್ಲಿ ಏಳು ಮತ್ತು ಈ ವರ್ಷ 12 ರಷ್ಟಿದೆ.
ಪತ್ತೆಯಾಗದ ಪ್ರಕರಣಗಳ ಪ್ರಮಾಣವು ಕಳವಳಕಾರಿಯಾಗಿಯೇ ಇದ್ದರೂ, ಒಟ್ಟಾರೆ ಸಂಖ್ಯೆಗಳು ತೀವ್ರ ಏರಿಕೆಯನ್ನು ಸೂಚಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
0-8 ವರ್ಷ ವಯಸ್ಸಿನ ಮಕ್ಕಳನ್ನು ಪತ್ತೆ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯಾಕೆಂದರೆ ಅವರು ಕಳ್ಳಸಾಗಣೆ ಮತ್ತು ಅಕ್ರಮ ದತ್ತು ಸ್ವೀಕಾರಕ್ಕೆ ಒಳಗಾಗುವ ಅಪಾಯವಿದೆ. ಆದಾಗ್ಯೂ, ಕಳೆದ ಮೂರು ವರ್ಷಗಳಲ್ಲಿ ಜನವರಿಯ ದತ್ತಾಂಶದ ವಸ್ತುನಿಷ್ಠ ವಿಶ್ಲೇಷಣೆಯು ಆತಂಕಕಾರಿ ಪರಿಸ್ಥಿತಿಯನ್ನು ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ ಜಂಟಿ ಪೊಲೀಸ್ ಆಯುಕ್ತ (ಕೇಂದ್ರ ವಲಯ) ಮಧುರ್ ವರ್ಮಾ. ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ದಿಲ್ಲಿ ಪೊಲೀಸರು 2022 ರಲ್ಲಿ ಪ್ರಾರಂಭಿಸಿದ 'ಆಪರೇಷನ್ ತಲಾಶ್' ಅನ್ನು ದಿಲ್ಲಿ ಪೊಲೀಸರ ಉತ್ತರ ಜಿಲ್ಲೆ ನಡೆಸುತ್ತಿದೆ, ಇದು ಕೇಂದ್ರ ವಲಯದ ಅಡಿಯಲ್ಲಿ ಬರುತ್ತದೆ.
ದತ್ತಾಂಶದ ಪ್ರಕಾರ, 8-12 ವರ್ಷ ವಯಸ್ಸಿನ ಗುಂಪು ಕ್ರಮೇಣ ಇಳಿಮುಖ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಜನವರಿ 2024 ರಲ್ಲಿ 34, 2025 ರಲ್ಲಿ 26 ಮತ್ತು 2026 ರಲ್ಲಿ 30 ಮಕ್ಕಳು ಕಾಣೆಯಾಗಿದ್ದಾರೆ. ಈ ಪೈಕಿ 2024 ರಲ್ಲಿ 23 ಮಕ್ಕಳು, 2025 ರಲ್ಲಿ 17 ಮತ್ತು 2026 ರಲ್ಲಿ 15 ಮಕ್ಕಳು ಪತ್ತೆಯಾಗಿಲ್ಲ. ಈ ವಯಸ್ಸಿನ ಗುಂಪಿನಲ್ಲಿ ಪತ್ತೆಯಾದ ಅನೇಕ ಮಕ್ಕಳು ಕೌಟುಂಬಿಕ ಕಲಹಗಳು, ಬಡತನ, ಈಡೇರದ ಬೇಡಿಕೆಗಳು ಅಥವಾ ವೈವಾಹಿಕ ಕಲಹದಿಂದಾಗಿ ಮನೆ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಹಲವರು ಸಿಂಗಲ್ ಪೇರೆಂಟ್ ಕುಟುಂಬಗಳಿಗೆ ಸೇರಿದವರಾಗಿದ್ದಾರೆ.
ಏತನ್ಮಧ್ಯೆ, 12-18 ವಯಸ್ಸಿನ ಗುಂಪಿನವರು ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚು ಇದ್ದಾರೆ. ಜನವರಿ 2024 ರಲ್ಲಿ 386 ಪ್ರಕರಣಗಳು, 2025 ರಲ್ಲಿ 392 ಮತ್ತು ಈ ವರ್ಷ 383 ಪ್ರಕರಣಗಳು ವರದಿಯಾಗಿವೆ. ಈ ಗುಂಪಿನಲ್ಲಿ ಇನ್ನೂ ಪತ್ತೆಯಾಗದ ಮಕ್ಕಳ ಸಂಖ್ಯೆ 2024ರಲ್ಲಿ 229, 2025ರಲ್ಲಿ 240 ಮತ್ತು 2026ರಲ್ಲಿ 246 ರಷ್ಟಿದೆ.
ದಿಲ್ಲಿ ಪೊಲೀಸರ ಪ್ರಕಾರ, 18 ವರ್ಷದೊಳಗಿನ ಪ್ರತಿಯೊಂದು ಕಾಣೆಯಾದ ಮಗುವನ್ನು ಅಪಹರಣ ಪ್ರಕರಣವೆಂದು ಪರಿಗಣಿಸಿ ತ್ವರಿತ ಮತ್ತು ಸಮಗ್ರ ತನಿಖೆ ನಡೆಸಲಾಗುತ್ತಿದೆ.
ದಿಲ್ಲಿಯಲ್ಲಿ ಕಾಣೆಯಾದ ಅಥವಾ ಅಪಹರಿಸಲ್ಪಟ್ಟ ಮಕ್ಕಳ ಪ್ರಕರಣಗಳಲ್ಲಿ ಇದುವರೆಗೆ ಯಾವುದೇ ಸಂಘಟಿತ ಗ್ಯಾಂಗ್ ಅಥವಾ ಕ್ರಿಮಿನಲ್ ಜಾಲವು ಭಾಗಿಯಾಗಿಲ್ಲ. ಎಲ್ಲಾ ಕಾಣೆಯಾದ ವ್ಯಕ್ತಿಗಳ ಪ್ರಕರಣಗಳಲ್ಲಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOPs) ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ತಕ್ಷಣದ ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ, ಮಕ್ಕಳನ್ನು ಒಳಗೊಂಡ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಮೀಸಲಾದ ಕಾಣೆಯಾದ ವ್ಯಕ್ತಿಗಳ ದಳಗಳು ಕಾರ್ಯನಿರ್ವಹಿಸುತ್ತಿವೆ. ಅಪರಾಧ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ದೇವೇಶ್ ಚಂದ್ರ ಶ್ರೀವಾಸ್ತವ ಹೇಳಿದ್ದಾರೆ.
ದಿಲ್ಲಿ ಪೊಲೀಸರು ಏನಂತಾರೆ?
ರಾಷ್ಟ್ರ ರಾಜಧಾನಿಯಲ್ಲಿ ಹುಡುಗಿಯರು ಕಾಣೆಯಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂಬ ವರದಿಗಳನ್ನು ದಿಲ್ಲಿ ಪೊಲೀಸರು ತಳ್ಳಿಹಾಕಿದ್ದಾರೆ. ಈ ಆರೋಪಗಳೆಲ್ಲವೂ ದಾರಿತಪ್ಪಿಸುವಂತಿದ್ದು, ಭಯ ಸೃಷ್ಟಿಸುವುದಕ್ಕಾಗಿ ಪಾವತಿಸಿದ ಆನ್‌ಲೈನ್ ಪ್ರಚಾರದಿಂದ ನಡೆಸಲ್ಪಡುತ್ತಿದೆ ಎಂದಿದ್ದಾರೆ.
ವೈರಲ್ ಆಗಿರುವ ಹೇಳಿಕೆಗಳ ಮೂಲವನ್ನು ಪತ್ತೆಹಚ್ಚಲಾಗಿದ್ದು, ಹುಡುಗಿಯರು ಕಾಣೆಯಾಗಿರುವ ಪ್ರಕರಣದ ತೀವ್ರ ಏರಿಕೆಯ ಬಗ್ಗೆ ಪ್ರಾಯೋಜಿತ ಪೋಸ್ಟ್‌ಗಳ ಮೂಲಕ ಸುದ್ದಿ ಹರಡುತ್ತಿರುವುದು ಕಂಡುಬಂದಿದೆ ಎಂದಿದ್ದಾರೆ ಪೊಲೀಸರು.
ಕೆಲವು ಸುಳಿವುಗಳನ್ನು ಅನುಸರಿಸಿದ ನಂತರ, ದಿಲ್ಲಿಯಲ್ಲಿ ಹುಡುಗಿಯರು ಕಾಣೆಯಾಗುತ್ತಿರುವ ಪ್ರಕರಣ ಹೆಚ್ಚುತ್ತಿರುವ ಕುರಿತಾಗಿ ಹಣ ಪಡೆದು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಹಣಕಾಸಿನ ಲಾಭಕ್ಕಾಗಿ ಭೀತಿ ಸೃಷ್ಟಿಸುವುದನ್ನು ಸಹಿಸಲಾಗುವುದಿಲ್ಲ. ಅಂತಹ ವ್ಯಕ್ತಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ದಿಲ್ಲಿ ಪೊಲೀಸರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂದಿ ಸಿನಿಮಾ ಮರ್ದಾನಿ 3 ಪ್ರಚಾರಕ್ಕಾಗಿ ಅಭಿಯಾನ?
ದಿಲ್ಲಿಯಿಂದ ಅನೇಕ ಮಕ್ಕಳು ಕಾಣೆಯಾಗಿದ್ದಾರೆ ಎಂಬ ಹೇಳಿಕೆಯನ್ನು ಹಿಂದಿ ಚಲನಚಿತ್ರವನ್ನು ಪ್ರಚಾರ ಮಾಡಲು ಪಾವತಿಸಿದ ಅಭಿಯಾನದಲ್ಲಿ ಬಳಸಲಾಗುತ್ತಿದೆ. ದಿಲ್ಲಿ ಪೊಲೀಸರು ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುತ್ತಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ X ನಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದಾರೆ.
ರಾಣಿ ಮುಖರ್ಜಿ ನಟನೆಯ ಮರ್ದಾನಿ 3 ಥಿಯೇಟರ್‌ನಲ್ಲಿ ತೆರೆಕಂಡ ನಂತರ ಮಾಳವಿಯಾ ಅವರು ಹಿಂದಿ ಸಿನಿಮಾ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇದು ದಿಲ್ಲಿಯಲ್ಲಿ ಕಾಣೆಯಾದ ಹುಡುಗಿಯರ ಪ್ರಕರಣಗಳಿಗೆ ಸಂಬಂಧಿಸಿದ ಸಿನಿಮಾವಾಗಿದೆ ಮರ್ದಾನಿ 3.
ಏತನ್ಮಧ್ಯೆ, ಬಿಜೆಪಿ ನೇತೃತ್ವದ ದಿಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷ (AAP), ಬಿಜೆಪಿ ದಿಲ್ಲಿಯನ್ನು ಲಾಪತಾಗಂಜ್ ಆಗಿ ಪರಿವರ್ತಿಸಿದೆ! (ಕಾಣೆಯಾದ ಜನರ ನಗರ). ಕಳೆದ 15 ದಿನಗಳಲ್ಲಿ, ಭಾರತದ ರಾಜಧಾನಿ ದಿಲ್ಲಿಯಲ್ಲಿ 800 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಅವರಲ್ಲಿ 63% ಹುಡುಗಿಯರು ಮತ್ತು ಮಹಿಳೆಯರು ಎಂದು ಎಎಪಿ X ನಲ್ಲಿ ಪೋಸ್ಟ್‌ನಲ್ಲಿ ಮಾಡಿದೆ.
ನಿವಾಸಿಗಳು ಶಾಂತವಾಗಿರಿ, ಜಾಗರೂಕರಾಗಿರಿ. ಪರಿಶೀಲಿಸದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನಂಬಬೇಡಿ. ತಪ್ಪು ಮಾಹಿತಿ ಹರಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಿಲ್ಲಿ ಪೊಲೀಸರು ಎಚ್ಚರಿಸಿದ್ದಾರೆ.
ಯಾವ ರಾಜ್ಯದಲ್ಲಿ ಹೆಚ್ಚು ನಾಪತ್ತೆ ಪ್ರಕರಣ?
2023 ಜುಲೈ 26ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ನೀಡಿದ ಲಿಖಿತ ಉತ್ತರದಲ್ಲಿನ ಮಾಹಿತಿ ಪ್ರಕಾರ 2021ರಲ್ಲಿ ಮಹಾರಾಷ್ಟ್ರದಲ್ಲಿ 56,498 ಮಹಿಳೆಯರು, ಮಧ್ಯಪ್ರದೇಶದಲ್ಲಿ 55,704 ಮಹಿಳೆಯರು ನಾಪತ್ತೆಯಾಗಿದ್ದಾರೆ. ಕರ್ನಾಟಕಲ್ಲಿ 2019ರಲ್ಲಿ 703 ಹುಡುಗಿಯರು, 12,247 ಮಹಿಳೆಯರು, 2020ರಲ್ಲಿ 834 ಹುಡುಗಿಯರು, 11,950 ಮಹಿಳೆಯರು, 2021ರಲ್ಲಿ 1,237 ಹುಡುಗಿಯರು ಮತ್ತು 12,964 ಮಹಿಳೆಯರು ನಾಪತ್ತೆಯಾಗಿದ್ದಾರೆ.
ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಕಾಣೆಯಾಗಿದ್ದು 9,639 ಮಕ್ಕಳು
ಕಳೆದ ಮೂರು ವರ್ಷಗಳಲ್ಲಿ (2023 ರಿಂದ ನವೆಂಬರ್ 15, 2025 ರವರೆಗೆ), ಕರ್ನಾಟಕದಾದ್ಯಂತ 9,639 ಮಕ್ಕಳು ಕಾಣೆಯಾಗಿದ್ದಾರೆ. ಅವರಲ್ಲಿ 1,094 ಮಕ್ಕಳು ಪತ್ತೆಯಾಗಿಲ್ಲ. ನಾಪತ್ತೆಯಾದ ಪ್ರಕರಣಗಳಲ್ಲಿ 6,981 (72%) ಹುಡುಗಿಯರು. ಈ ಪ್ರಕರಣಗಳಲ್ಲಿ 86% ರಷ್ಟು ಪತ್ತೆಹಚ್ಚಿ ಮಕ್ಕಳನ್ನು ಅವರ ಕುಟುಂಬಗಳಿಗೆ ಒಪ್ಪಿಸಲಾಗಿದೆ. ಇದೇ ಅವಧಿಯಲ್ಲಿ, 2,748 ಬಾಲಕರು ಕಾಣೆಯಾಗಿದ್ದಾರೆ. ಅವರಲ್ಲಿ 2,479 ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಬೆಂಗಳೂರು ನಗರದಲ್ಲಿ ವರದಿ ಆಗಿದೆ. ನಾಪತ್ತೆ ಪ್ರಕರಣದಲ್ಲಿ ನಂತರ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆ ಇದೆ. ಇದರಲ್ಲಿ 6,894 ಪ್ರಕರಣಗಳು ಹುಡುಗಿಯರ ನಾಪತ್ತೆ ಪ್ರಕರಣವಾಗಿದ್ದು 825 ಪ್ರಕರಣಗಳು ಬಾಕಿ ಉಳಿದಿವೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಮುಕ್ತಾಯಗೊಂಡ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ನೀಡಿದ ಉತ್ತರದಲ್ಲಿ ಈ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ.
2023 ರಲ್ಲಿ, 3,039 ಕಾಣೆಯಾದ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 77 ಪ್ರಕರಣಗಳು ಬಗೆಹರಿಯದೆ ಉಳಿದಿವೆ. 2024 ರಲ್ಲಿ ವರದಿಯಾದ 3,411 ಕಾಣೆಯಾದ ಮಕ್ಕಳ ಪೈಕಿ 145 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ನವೆಂಬರ್ 15, 2025 ರವರೆಗೆ, 3,189 ಕಾಣೆಯಾದ ಪ್ರಕರಣಗಳು ವರದಿಯಾಗಿವೆ, ಅವುಗಳಲ್ಲಿ 872 ಇನ್ನೂ ಪತ್ತೆಯಾಗಿಲ್ಲ.
ಬೆಂಗಳೂರಿನಲ್ಲಿ ಅತಿ ಹೆಚ್ಚು
ಬೆಂಗಳೂರಿನಲ್ಲಿ 3,268 ಕಾಣೆಯಾದ ಪ್ರಕರಣಗಳು ವರದಿಯಾಗಿವೆ, ಅವುಗಳಲ್ಲಿ 426 ಬಾಕಿ ಉಳಿದಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 694 ಮಕ್ಕಳು ಕಾಣೆಯಾದ ಪ್ರಕರಣ ವರದಿಯಾಗಿದ್ದು, 55 ಮಕ್ಕಳು ಪತ್ತೆಯಾಗಿಲ್ಲ. ಕಳೆದ ಮೂರು ವರ್ಷಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 450 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 33 ಬಾಕಿ ಉಳಿದಿದೆ.
2025 ಡಿಸೆಂಬರ್ 9ರಂದು ಸುಪ್ರೀಂಕೋರ್ಟ್ ಕಾಣೆಯಾದ ಮಕ್ಕಳ ಕುರಿತು ಆರು ವರ್ಷಗಳ ರಾಷ್ಟ್ರವ್ಯಾಪಿ ಡೇಟಾವನ್ನು ಒದಗಿಸುವಂತೆ ಮತ್ತು ಅಂತಹ ಮಾಹಿತಿಯನ್ನು ಸಂಗ್ರಹಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯದಲ್ಲಿ ಮೀಸಲಾದ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

