ಕಾಸರಗೋಡು: ನಗರಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 29ಲಕ್ಷ ರೂ. ನಗದು ಹಾಗೂ 97ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ನಿವಾಸಿ, ಹೊಸದುರ್ಗ ಕೋಟಚ್ಚೇರಿಯಲ್ಲಿ ವಾಸಿಸುತ್ತಿರುವ ತುಕಾರಾಂ ಹಾಗೂ ಹೊಸದುರ್ಗ ಮೇಲಂಗೋಡಿನಲ್ಲಿ ವಾಸಿಸುತ್ತಿರುವ ರೋಹಿತ್ ಬಂಧಿತರು. ಅನಧಿಕೃತವಾಗಿ ಚಿನ್ನ ಹಾಗೂ ನಗದು ಸಾಗಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕಾಸರಗೋಡು ನಗರ ಠಾಣೆ ಆಸುಪಾಸು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ನಗ, ನಗದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಇದಕ್ಕೆ ಸೂಕ್ತ ದಾಖಲೆ ಪತ್ರ ಹಾಜರುಪಡಿಸಿದ ನಂತರ ವಾರಸುದಾರರಿಗೆ ಬಿಡಿಸಿಕೊಳ್ಳಲು ಅವಕಾಶವಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರು ಚಿನ್ನ ವ್ಯಾಪಾರಿಗಳಾಗಿದ್ದು, ಚಿನ್ನ ಮಾರಾಟದಿಂದ ಲಭಿಸಿದ ಮೊತ್ತ ಇದಾಗಿರಬೇಕೆಂದು ಸಂಶಯಿಸಲಾಗಿದೆ. ಪ್ರಕರಣದ ಬಗ್ಗೆ ಎನ್‍ಫೊರ್ಸ್‍ಮೆಂಟ್ ಅಧಿಕಾರಿಗಳೂ ತನಿಖೆ ನಡೆಸುತ್ತಿದ್ದಾರೆ.

