ನವದೆಹಲಿ: 'ಮಧ್ಯಪ್ರಾಚ್ಯ ದೇಶಗಳು ಬಹುಸ್ತರದ ಸವಾಲುಗಳನ್ನು ಎದುರಿಸುತ್ತಿವೆ. ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯನ್ನು ಬೆಂಬಲಿಸುವವರಿಗೆ ನಮ್ಮ ಬೆಂಬಲ. ಗಾಜಾದಲ್ಲಿ ಯುದ್ಧ ನಿಲ್ಲಿಸುವುದೇ ನಮ್ಮೆಲ್ಲರ ಒಮ್ಮತದ ಆದ್ಯತೆ' ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಶನಿವಾರ ಅಭಿಪ್ರಾಯಪಟ್ಟರು.
ಭಾರತ-ಅರಬ್ ದೇಶಗಳ ವಿದೇಶಾಂಗ ಸಚಿವರ ಎರಡನೇ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯ ಸಭೆಯನ್ನು ಭಾರತವು ಆಯೋಜಿಸಿದೆ.
'ವಿವಿಧ ಕಾರಣಗಳಿಂದ ವಿಶ್ವವು ರೂಪಾಂತರಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಾವು ಇಲ್ಲಿ ಸಭೆ ಸೇರಿದ್ದೇವೆ. ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾ ಪ್ರದೇಶಗಳಲ್ಲಿ ಕಳೆದ ವರ್ಷ ತೀವ್ರ ಬದಲಾವಣೆಗಳಾಗಿವೆ. ಇವೆಲ್ಲವೂ ನಮ್ಮೆಲ್ಲರ ಮೇಲೆಯೂ ಪರಿಣಾಮ ಬೀರುತ್ತವೆ. ಅರಬ್ ದೇಶಗಳು ಮತ್ತು ಭಾರತದ ಸಂಬಂಧದ ಮೇಲೆಯೂ ತುಸು ಪರಿಣಾಮ ಬೀರುತ್ತವೆ' ಎಂದರು.

