ಗುರುವಾರ ರಾಜಸ್ಥಾನದ ಚುರುನಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ ಧನ್ಕರ್, 'ಆರೋಗ್ಯಯುತ ಶರೀರ ಮೊದಲ ಸುಖ ಎಂದು ಹೇಳಲಾಗುತ್ತದೆ. ನಾನೆಂದಿಗೂ ನನ್ನ ಆರೋಗ್ಯವನ್ನು ನಿರ್ಲಕ್ಷಿಸಿಲ್ಲ. ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದಾಗ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆಂದು ಎಂದಿಗೂ ಹೇಳಿರಲಿಲ್ಲ. ನಾನು ಆರೋಗ್ಯಕ್ಕೆ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿದ್ದೆ ಮತ್ತು ಆದ್ಯತೆ ನೀಡಲೇಬೇಕು' ಎಂದು ತಿಳಿಸಿದರು.
ರಾಷ್ಟ್ರಪತಿಗಳಿಗೆ ತನ್ನ ಜು.21,2025ರ ಪತ್ರದಲ್ಲಿ ಧನ್ಕರ್, 'ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ನಾನು ಹುದ್ದೆಯನ್ನು ತೊರೆಯುತ್ತಿದ್ದೇನೆ' ಎಂದು ಹೇಳಿದ್ದರು.
ಕಳೆದ ವರ್ಷದ ಆಗಸ್ಟ್ ನಲ್ಲಿ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಧನ್ಕರ್ ಅಚ್ಚರಿಯ ರಾಜೀನಾಮೆಯ ಬಳಿಕ ಅವರ ಮೌನವನ್ನು ಪ್ರಶ್ನಿಸಿದ್ದರು.
ಅವರ ರಾಜೀನಾಮೆಯ ಹಿಂದೆ ದೊಡ್ಡ ಕಥೆಯೇ ಇದೆ. ಕೆಲವರಿಗೆ ಅದು ತಿಳಿದಿರಬಹುದು,ಕೆಲವರಿಗೆ ತಿಳಿದಿಲ್ಲದಿರಬಹುದು. ಅವರು ಏಕೆ ಬಚ್ಚಿಟ್ಟುಕೊಂಡಿದ್ದಾರೆ ಎಂಬ ಬಗ್ಗೆಯೂ ಕಥೆಯಿದೆ. ಭಾರತದ ಉಪರಾಷ್ಟ್ರಪತಿಗಳು ಒಂದು ಮಾತನ್ನೂ ಹೇಳಲಾಗದ ಮತ್ತು ಬಚ್ಚಿಟ್ಟುಕೊಳ್ಳಬೇಕಾದ ಸ್ಥಿತಿಯಲ್ಲೇಕಿದ್ದಾರೆ?. ರಾಜ್ಯಸಭೆಯಲ್ಲಿ ಇದ್ದಕ್ಕಿದ್ದಂತೆ ಸಿಡಿಯುತ್ತಿದ್ದ ವ್ಯಕ್ತಿ ಈಗ ಸಂಪೂರ್ಣವಾಗಿ ಮೌನವಾಗಿದ್ದಾರೆ ಎಂದು ರಾಹುಲ್ ಗಾಂದಿ ಆಗ ಹೇಳಿದ್ದರು.

