ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ವಿವಾಹಿತ ಮಹಿಳೆಯ ವಿವಾಹ ಊರ್ಜಿತವಾಗಿರುವ ಸಂದರ್ಭದಲ್ಲಿ ಆಕೆ ಮತ್ತೊಂದು ವಿವಾಹವಾಗುವ ಅರ್ಹತೆ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾಗಿ ಪರಪುರುಷನ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿ, ವಕೀಲರೊಬ್ಬರ ವಿರುದ್ಧ ವಕೀಲೆ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿದೆ. ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾಗಿ ವಕೀಲನ ವಿರುದ್ಧ ದೂರು ನೀಡಲಾಗಿತ್ತು.
ದೂರು ನೀಡಿದ ಮಹಿಳೆ ವಿವಾಹದ ಬಳಿಕ ವಕೀಲನ ಜತೆ ದೈಹಿಕ ಸಂಪರ್ಕ ಹೊಂದಿದ್ದು, ಇದು ಒಪ್ಪಿತ ಸಂಬಂಧ ಬಳಿಕ ಹದಗೆಟ್ಟಿದೆ ಎನ್ನುವುದಕ್ಕೆ ಒಳ್ಳೆಯ ನಿದರ್ಶನ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
"ಆದ್ದರಿಂದ ವಾದದ ಕಾರಣಕ್ಕೆ ಆರೋಪಿ ಪುರುಷ ವಿವಾಹವಾಗುವ ಸುಳ್ಳು ಭರವಸೆ ನೀಡಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು ಎನ್ನುವ ವಾದವನ್ನು ಒಪ್ಪಿಕೊಂಡರೂ, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದ್ದು ಎನ್ನಲಾದ ಮೊದಲ ದಿನಾಂಕದಂದು ಹಾಗೂ ಆ ಬಳಿಕದ ದಿನಾಂಕಗಳಂದು, ಎಫ್‍ಐಆರ್ ದಾಖಲಿಸುವ ದಿನಾಂಕದವರೆಗೆ ಮಹಿಳೆ ವಿವಾಹಕ್ಕೆ ಅರ್ಹತೆ ಹೊಂದಿಲ್ಲದ ಹಿನ್ನೆಲೆಯಲ್ಲಿ ಇಂಥ ಭರವಸೆಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಹಾಗೂ ಅದು ಸ್ವೀಕಾರಾರ್ಹವಲ್ಲ" ಎಂದು ಸ್ಪಷ್ಟಪಡಿಸಲಾಗಿದೆ.

