"ಅವರು ಗುರುವಾರ ಸಂಜೆ 4 ಗಂಟೆಗೆ ಜೈಲು ಅಧಿಕಾರಿಗಳ ಮುಂದೆ ಶರಣಾದರು. ಇದೀಗ ಜೈಲು ಅಧಿಕಾರಿಗಳು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅನುಸರಿಸಲಿದ್ದಾರೆ," ಎಂದು ಜೈಲಿನ ಮೂಲಗಳು ತಿಳಿಸಿವೆ.
ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಯಾದವ್ ಅವರಿಗೆ ನೀಡಲಾಗಿದ್ದ ಗಡುವನ್ನು ವಿಸ್ತರಿಸುವಂತೆ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿತು.
ಫೆಬ್ರವರಿ 2ರಂದು ಬುಧವಾರ ಸಂಜೆ 4 ಗಂಟೆಯೊಳಗೆ ಶರಣಾಗುವಂತೆ ಸೂಚಿಸಲಾಗಿದ್ದ ಹಿನ್ನೆಲೆಯಲ್ಲಿ, ಯಾದವ್ ಪರ ವಕೀಲರು ನಟ 50 ಲಕ್ಷ ರೂಪಾಯಿಗಳನ್ನು ವ್ಯವಸ್ಥೆ ಮಾಡಿದ್ದಾರೆ ಹಾಗೂ ಪಾವತಿ ಮಾಡಲು ಇನ್ನೂ ಒಂದು ವಾರದ ಅವಧಿ ನೀಡುವಂತೆ ನ್ಯಾಯಾಲಯವನ್ನು ಮನವಿ ಮಾಡಿದ್ದರು.
ಆದರೆ, ನ್ಯಾಯಮೂರ್ತಿ ಸ್ವರಣ ಕಾಂತ್ ಶರ್ಮಾ, ಶರಣಾಗಲು ಸಮಯ ವಿಸ್ತರಿಸುವಂತೆ ಕೋರಿ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ಅವರಿಗೆ ಯಾವುದೇ ರೀತಿಯ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

