ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗಿ ಯುವಕರಿಗೆ ಶಿಷ್ಯವೇತನ ನೀಡುವ ಬಂಗ್ಲರ್ ಯುಬ-ಸಾಥಿ ಎಂಬ ಕಲ್ಯಾಣ ಹೊಸ ಯೋಜನೆಯನ್ನು ಘೋಷಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಲಕ್ಷಮಿರ್ ಭಂದರ್ ಫಲಾನುಭವಿಗಳಿಗೆ ನೀಡುವ ಮೊತ್ತವನ್ನು ಶೇ.50ರಷ್ಟು ಹೆಚ್ಚಿಸಿದ್ದಾರೆ.
ವಿಧಾನಸಭಾ ಚುನಾವಣೆ ನಡೆಯುವ ಮುನ್ನ ಮಮತಾ ಬ್ಯಾನರ್ಜಿ ಸರಕಾರ ಮಂಡಿಸಿದ ಕೊನೆಯ ಬಜೆಟ್‍ನ ಪ್ರಮುಖ ಆಕರ್ಷಣೆ ಇದಾಗಿದೆ.
ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಗುರುವಾರ ಮಂಡಿಸಿದ ಬಜೆಟ್‍ನಲ್ಲಿ ರಾಜ್ಯ ಸರಕಾರಿ ನೌಕರರಿಗೂ ಶೇಕಡ 4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿರುವುದು ನೌಕರ ವರ್ಗಕ್ಕೂ ಖುಷಿ ನೀಡಿದೆ. ಕರ್ಮಶ್ರೀ ಯೋಜನೆಯ ಹೆಸರನ್ನು ಮಹಾತ್ಮ ಶ್ರೀ ಎಂದು ಬದಲಿಸಿರುವ ಸರ್ಕಾರ, ಕನಿಷ್ಠ ಕೆಲಸದ ದಿನಗಳನ್ನು 75ರಿಂದ 100ಕ್ಕೆ ಏರಿಸಿದೆ. ಕೇಂದ್ರ ಸರ್ಕಾರ ಎಂ-ನರೇಗಾ ಯೋಜನೆಯನ್ನು ಬದಲಿಸಿದ್ದಕ್ಕೆ ಸೆಡ್ಡುಹೊಡೆದಿರುವ ಮಮತಾ ಸರ್ಕಾರ ಈ ಬದಲಾವಣೆ ತಂದಿದೆ.
ಲಕ್ಷ್ಮೀರ್ ಭಂದರ್ ಯೋಜನೆಗೆ 2021ರ ಚುನಾವಣೆಗೆ ಮುನ್ನ ಮಮತಾ ಚಾಲನೆ ನೀಡಿದ್ದರು. ಈ ಯೋಜನೆಯಡಿ ಫಲಾನುಭವಿ ಮಹಿಳೆಯರಿಗೆ ನೀಡುತ್ತಿದ್ದ ಮೊತ್ತವನ್ನು 1,000 ರೂ. ನಿಂದ 1,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ, ಅರೆ-ಶಿಕ್ಷಕ ಮತ್ತು ಪೌರ ಸ್ವಯಂಸೇವಕರ ಗೌರವಧನವನ್ನು ಕೂಡಾ ಮಾಸಿಕ 1,000 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಸಮಾಜ ಕಲ್ಯಾಣ ಯೋಜನೆಗಳು ಮಹತ್ವದ ಮೈಲುಗಲ್ಲು ದಾಟಿದ್ದು, ಇದೀಗ 94 ಯೋಜನೆಗಳಿವೆ. ಹೊಸ ಯೋಜನೆಗಳ ಮೂಲಕ ನಾವು ಶತಕ ಸಾಧಿಸಿದ್ದೇವೆ ಎಂದು ಭಟ್ಟಾಚಾರ್ಯ ಬಣ್ಣಿಸಿದರು.

