ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಶ್ರೀ ಗಾಯತ್ರೀ ದೇವಿ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ, ನವಚಂಡಿಕಾ ಯಾಗ ವೇದಮಾತೆ ಶ್ರೀ ಗಾಯತ್ರೀ ದೇವಿಯ ಗರ್ಭಗೃಹದ ಜೀರ್ಣೋದ್ದಾರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣನವರ ಆಚಾರ್ಯತ್ವದಲ್ಲಿ, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು.
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಮತ್ತು ಕಟೀಲಿನ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರ ಮತ್ತು ಗಣ್ಯರ ದಿವ್ಯ ಉಪಸ್ಥಿತಿಯಲ್ಲಿ ಮಾಜಿ ರಾಜ್ಯ ಸಭಾ ಸದಸ್ಯ ಕೆ.ಸಿ ರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀಗಳವರ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿ, ಮುಂದಿನ ಯೋಜನೆಗಾಗಿ ಎಲ್ಲರೂ ಬೆಂಬಲಿಸಬೇಕೆಂದು ಆಗ್ರಹಿಸಿದರು.
ಶ್ರೀಗಳು ಆಶೀರ್ವಚನ ನೀಡಿ, ಅನಾಥ ಆಶ್ರಮವಾಗಿ ಆರಂಭವಾದ ಈ ಆಶ್ರಮವು ಮರವಾಗಿ ಬೆಳೆದು ದೀನ ದುಃಖಿತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಆಶ್ರಮದ ಆಶ್ರಯ ಯೋಜನೆ ಮೂಲಕ 47 ಮಂದಿಗೆ ಈಗಾಗಲೇ ಗೃಹ ನಿರ್ಮಾಣ ಮಾಡಿ ಹಸ್ತಾಂತರಿಸಿದ್ದೇವೆ. 5 ಮಂದಿ ಅರ್ಹ ಫಲಾನುಭವಿಗಳಿಗೆ ದಾನಿಗಳ ಸಹಕಾರದಿಂದ ಗೃಹ ನಿರ್ಮಾಣಗೈದು ಹಸ್ತಾಂತರಿಸಲಿದ್ದೇವೆ ಎಂದು ತಿಳಿಸಿ ಶ್ರೀಗಾಯತ್ರೀ ದೇವಿಯ ಗರ್ಭಗೃಹ ಜೀರ್ಣೋದ್ಧಾರದ ಸಮಿತಿಯನ್ನು ಘೋಷಿಸಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರಾಜ್ಯ ಸಭಾ ಸದಸ್ಯ ಕೆ.ನಾರಾಯಣ ಬೆಂಗಳೂರು ಮಾತನಾಡಿದರು. ಡಾ. ಎಸ್.ಎನ್.ವಿ.ಎಲ್ ನರಸಿಂಹರಾಜು ಬೆಂಗಳೂರು ಅವರು ವೇದ ಮಾತೆ ಶ್ರೀ ಗಾಯತ್ರೀ ದೇವಿಯ ನೂತನ ಗರ್ಭಗೃಹಕ್ಕೆ ನಿಧಿ ಸಮರ್ಪಣೆಯ ಕೂಪನ್ನುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬಳಿಕ ಪರಮಪೂಜ್ಯರು ಅತಿಥಿಗಳ ಸಮಕ್ಷತ್ವದಲ್ಲಿ 2026 ರ ಪದ್ಮಶ್ರೀ ಪುರಸ್ಕøತೆ ಬೆಂಗಳೂರು ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಎಸ್.ಜಿ. ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು. ಆಶ್ರಮದ ಆಶ್ರಯ ಯೋಜನೆಯಡಿಯಲ್ಲಿ ನವೀಕರಣಗೊಳಿಸಿದ ಮನೆಯನ್ನು ಚಂದ್ರಶೇಖರ ಶೆಟ್ಟಿ ಮುಂಡ್ಕೂರು ಹಸ್ತಾಂತರಿಸಿದರು. ಜೊತೆಗೆ ಕೇಪ್ಸ್ ಫೌಂಡೇಶನ್ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ 3 ಮನೆಯ ಫಲಾನುಭವಿಗಳಿಗೆ ಆಯ್ಕೆ ಪತ್ರ ವಿತರಣೆ ಮಾಡಿ ಮಾತನಾಡಿದರು.
ರಘುರಾಮ.ಕೆ.ಶೆಟ್ಟಿ ಕುಳೂರು ಕನ್ಯಾನ, ಮುಂಬೈ ಅವರು ಇನ್ನೊಂದು ಮನೆಯ ಕೊಡುಗೆ ನೀಡಿ ಅದರ ಆಯ್ಕೆ ಪತ್ರವನ್ನು ಹಸ್ತಾಂತರಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಗಳಾಗಿ ಉಪಸ್ಥಿತರಿದ್ದ ಬಿ.ನಾಗರಾಜ, ಮೋಹನ ಶೆಟ್ಟಿ ಮಜ್ಜಾರು ಶುಭಹಾರೈಸಿದರು. ಶಶಿಧರ ಶೆಟ್ಟಿ ಗ್ರಾಮಚಾವಡಿ, ರಾಜೇಶ್ ಕೆ.ರೈ, ಬಾಲಕೃಷ್ಣ ಬೆಂಗಳೂರು, ಅನುಜ್ ವೀರೇಂದ್ರಸಿಂಗ್ ಕಾರ್ಡಿಯಾನ್, ಪುಷ್ಪಕುಮಾರ್ ಕೊಚ್ಚಿ, ಮಧ್ಯಪ್ರದೇಶದ ಯತಿ ವಿನಯಸಾಗರ್ ಸ್ವಾಮೀಜಿಯವರು ಉಪಸ್ಥಿತರಿದ್ದರು.
ತಸ್ಮಯ್ ಆಚಾರ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪುರುಷೋತ್ತಮ ಅಡ್ಯಾರ್ ಸ್ವಾಗತಿಸಿ, ಕೆ.ಎಂ ಗಂಗಾಧರ್ ಕೊಂಡೆವೂರು, ಕಾರ್ಯಕ್ರಮದ ನಿರೂಪಿಸಿ, ವಂದಿಸಿದರು
ಸಂಜೆ 6.30ಕ್ಕೆ ನಕ್ಷತ್ರವನದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ಜರಗಿತು. ಸೂರ್ಯಾಸ್ತ 6.37 ಕ್ಕೆ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು 20 ನೇ ವರ್ಷದ ಅಖಂಡ ಭಜನಾಸಪ್ತಾಹಕ್ಕೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು.

