ಕಾಸರಗೋಡು: ಬಸ್ ಮಾಲಿಕರಾಗಿದ್ದು, ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಡಳಿತ ಸಮಿತಿಯಲ್ಲಿ ಪದಾಧಿಕಾರಿಗಳಾಗಿ ಮುಂದುವರಿಯುತ್ತಿರುವವರನ್ನು ತಾಲೂಕು ಬಸ್ ಮಾಲಿಕರ ಸಂಘದ ವತಿಯಿಂದ ಗೌರವಿಸಲಾಯಿತು.
ಕಾಸರಗೋಡು ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಘದ ಮಹಾಸಭೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎರ್ನಾಕುಲಂ ಜಿಲ್ಲಾ ಉಪ ಸಾರಿಗೆ ಆಯುಕ್ತ ಸಜಿ ಪ್ರಸಾದ್ ಸಮಾರಂಭ ಉದ್ಘಾಟಿಸಿದರು. ಖಾಸಗಿ ಬಸ್ ಮಾಲಿಕರು ಹಾಗೂ ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಎಣ್ಮಕಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್, ಕಾಞಂಗಾಡು ನಗರಸಭಾ ಸದಸ್ಯ ಪ್ರದೀಪ್ ಕುಮಾರ್ ಅವರನ್ನು ಗೌರವಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಮತ್ತು ಫೆಡರೇಶನ್ ಕೇಂದ್ರ ಸಮಿತಿ ಸದಸ್ಯ ಕೆ. ಗಿರೀಶ್ ಅವರ ಅತ್ಯುತ್ತಮ ಕಾರ್ಯವೈಖರಿಗಾಗಿ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭ ಕಳೆದ ಬಾರಿ ಎಸ್ಸೆಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸಿಕೊಂಡ ಬಸ್ ಮಾಲಿಕರ ಸಂಘದ ಸದಸ್ಯರ ಮಕ್ಕಳಾದ ಹಿನಾ ಫಾತಿಮಾ ಮತ್ತು ಮುನಾಸಿರ್ ಅವರನ್ನು ಅಭಿನಂದಿಸಲಾಯಿತು. ಯಶಸ್ವಿ ವಿದ್ಯಾರ್ಥಿಗಳಿಗೆ ಮಾಜಿ ಜಿಲ್ಲಾಧ್ಯಕ್ಷ ಮಾಹಿನ್ ಹಾಜಿ ಅವರ ಸ್ಮರಣಾರ್ಥ ಕೆ.ಸಿ. ಮಾಹಿನ್ ಹಾಜಿ ಶೈಕ್ಷಣಿಕ ಮತ್ತು ದತ್ತಿ ಟ್ರಸ್ಟ್ ಪ್ರಶಸ್ತಿ ನೀಡಲಾಯಿತು.
ತಾಲೂಕು ಸಮಿತಿ ಅಧ್ಯಕ್ಷ ಕೆ.ಎನ್. ಬಾಲಕೃಷ್ಣನ್, ಕಾರ್ಯದರ್ಶಿ ಸಿ.ಎ. ಮಹಮ್ಮದ್‍ಕುಞÂ, ಜಿಲ್ಲಾಧ್ಯಕ್ಷ ಕೆ.ಗಿರೀಶ್, ಕಾರ್ಯದರ್ಶಿ ಟಿ.ಲಕ್ಷ್ಮಣನ್, ಕಾರ್ತಿಕ್ ರಾಜ್, ರಾಜೇಶ್.ಯು, ಮತ್ತು ಶಶಿಧರ ರೈ ಉಪಸ್ಥೀತರಿದ್ದರು. ರಾಧಾಕೃಷ್ಣನ್ ಎಸ್ ವಂದಿಸಿದರು.


