HEALTH TIPS

ಮಹಾತ್ವಾಕಾಂಕ್ಷೆಗೆ ಹೊಸ ಭಾಷ್ಯ ಬರೆದ Gen Z ಕಾರ್ಮಿಕ ಪಡೆ ನಿಜವಾಗಿಯೂ ಬಯಸುವುದೇನು?

ಇತ್ತೀಚೆಗಿನ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ ಅರ್ಧದಷ್ಟು ಯುವ ಕಾರ್ಮಿಕರು ಸಾಂಪ್ರದಾಯಿಕ ವೃತ್ತಿಜೀವನದಲ್ಲಿ "ಮಹಾತ್ವಾಕಾಂಕ್ಷಿಗಳು" ಎಂದು ಗುರುತಿಸಲಾಗುತ್ತಿಲ್ಲ. ಉದ್ಯೋಗದಲ್ಲಿ ಭಡ್ತಿ ನಿರೀಕ್ಷಿಸುವ ಬದಲಾಗಿ ಭಾವನಾತ್ಮಕ ಸ್ಥಿರತೆ, ಮಾನಸಿಕ ಆರೋಗ್ಯ ಮತ್ತು ನಮ್ಮ ಜೀವನದ ಮೇಲೆ ನಿಯಂತ್ರಣ ಇರುವುದು ಮುಖ್ಯ ಎಂದು ಬಯಸುತ್ತಾರೆ.

ದಶಕಗಳಿಂದ ಉದ್ಯೋಗದಲ್ಲಿ 'ಮಹತ್ವಾಕಾಂಕ್ಷೆ' ಎಂದರೆ ಬೇಗನೇ ಮೇಲೇರುವುದು, ಹೆಚ್ಚು ಗಳಿಸುವುದು, ದೊಡ್ಡ ತಂಡಗಳ ಮೇಲ್ವಿಚಾರಣೆ ಮಾಡುವುದು, ಘನತೆಯಿರುವ ಹುದ್ದೆಗಳ ಬೆನ್ನು ಹತ್ತುವುದು ಆಗಿತ್ತು. ಇದೀಗ Gen Z ಕಾರ್ಮಿಕರು ಇಂತಹ ಸಾಂಪ್ರದಾಯಿಕ ಓಟದ ಹಿಂದೆ ಬಿದ್ದಿಲ್ಲ. ಅವರಿಗೆ ಮಹಾತ್ವಾಂಕ್ಷೆ ಇಲ್ಲ ಎಂದಲ್ಲ. ಆದರೆ ಮಾಡಿದ ಕೆಲಸಕ್ಕೆ ಸಾಕಷ್ಟು ಪ್ರತಿಫಲ ಸಿಗದೆ ಇದ್ದಾಗ ಅದರಲ್ಲಿ ಮುಂದುವರಿಯುವುದು ಸರಿಯಲ್ಲ ಎಂಬುದು ಅವರ ಭಾವನೆ!

ಇತ್ತೀಚೆಗೆ ಕಾರ್ಮಿಕ ಪಡೆಯೊಂದರ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಈ ಕುರಿತಂತೆ ಆಘಾತಕಾರಿ ಸುದ್ದಿಯೊಂದು ಬಯಲಾಗಿದೆ. ಅರ್ಧದಷ್ಟು ಯುವ ಕಾರ್ಮಿಕರು ಸಾಂಪ್ರದಾಯಿಕ ವೃತ್ತಿಜೀವನದಲ್ಲಿ "ಮಹಾತ್ವಾಕಾಂಕ್ಷಿಗಳು" ಎಂದು ಗುರುತಿಸಲಾಗುತ್ತಿಲ್ಲ. ಉದ್ಯೋಗದಲ್ಲಿ ಭಡ್ತಿ ನಿರೀಕ್ಷಿಸುವ ಬದಲಾಗಿ ಭಾವನಾತ್ಮಕ ಸ್ಥಿರತೆ, ಮಾನಸಿಕ ಆರೋಗ್ಯ ಮತ್ತು ನಮ್ಮ ಜೀವನದ ಮೇಲೆ ನಿಯಂತ್ರಣ ಇರುವುದು ಮುಖ್ಯ ಎಂದು ಬಯಸುತ್ತಾರೆ. ಮತ್ತೊಂದು ಜಾಗತಿಕ ಅಧ್ಯಯನವು ಹೇಳಿರುವ ಪ್ರಕಾರ ಶೇ 47ರಷ್ಟು ಉದ್ಯೋಗಿಗಳು ಕಾರ್ಪೋರೇಟ್ ಏಣಿಯನ್ನು ಹತ್ತುವುದು, ಉದ್ಯೋಗದಲ್ಲಿ ಸಮತೋಲನ ಸಾಧಿಸುವುದು ಮತ್ತು ಮೇಲಿನ ಸ್ತರಕ್ಕೆ ಸೇರುವ ಕುರಿತು ಆಸಕ್ತಿ ಹೊಂದಿಲ್ಲ.

ಯಶಸ್ಸಿಗೆ ಹೊಸ ವ್ಯಾಖ್ಯಾನ

ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿರುವ ಸಹನಾ ತಮ್ಮ ಉದ್ಯೋಗದಲ್ಲಿ ಯಾವುದೇ ಪ್ರಗತಿ ಕಾಣುವ ಭರವಸೆ ಹೊಂದಿಲ್ಲ. ಹೀಗಾಗಿ ಉದ್ಯೋಗವನ್ನೇ ಬದಲಿಸಬೇಕು ಎಂದು ಬಯಸುತ್ತಿದ್ದಾರೆ. "ಮಾಧ್ಯಮದಲ್ಲಿ ಪ್ರಗತಿಗೆ ಹೆಚ್ಚು ಅವಕಾಶಗಳು ಇದ್ದಂತಿಲ್ಲ. ಈ ಹುದ್ದೆಯಲ್ಲಿ ಮುಂದುವರಿದು ಮುಂದೆ ಸಂಪಾದಕರ ಸ್ಥಾನದಲ್ಲಿ ಕೂರುತ್ತೇನೆ ಎಂದು ನನಗೆ ಅನಿಸುವುದಿಲ್ಲ. ಹೀಗಾಗಿ ಬೇರೆ ಯಾವುದಾದರೂ ಉದ್ಯೋಗ ಹುಡುಕಬೇಕೆಂದಿರುವೆ. ಇಲ್ಲಿ ರಾಜಕೀಯವೂ ಇದೆ. ಯಾವಾಗ ಕೆಲಸದಿಂದ ತೆಗೆದು ಹಾಕುತ್ತಾರೆ ಎನ್ನುವ ಆತಂಕವೂ ಇದೆ" ಎನ್ನುತ್ತಾರೆ ಸಹನಾ.

ಬೆಂಗಳೂರು ಮೂಲದ ಡಾಟಾ ಅನಾಲಿಸ್ಟ್ 24 ವರ್ಷದ ಆರವ್ ಮಾಧ್ಯಮವೊಂದಕ್ಕೆ ಹೇಳುವ ಪ್ರಕಾರ, "ನನ್ನ ಹಿರಿಯರು ಇಡೀ ದಿನ ಕೆಲಸ ಮಾಡಿ 30ರ ಪ್ರಾಯಕ್ಕಾಗುವಾಗ ಸುಸ್ತಾಗಿರುವುದನ್ನು ಕಂಡಿದ್ದೇನೆ. ಶಾಶ್ವತವಾಗಿ ಒತ್ತಡ ಎದುರಿಸುವುದೇ ಮಹಾತ್ವಾಕಾಂಕ್ಷೆಯಾಗಿದ್ದರೆ, ನನಗೆ ಅದು ಬೇಡ" ಎನ್ನುತ್ತಾರೆ ಆರವ್.

ಹೀಗೆ ಒತ್ತಡ ಎದುರಿಸಲು ಬಯಸದ ಮನೋಸ್ಥಿತಿಯನ್ನು ಮಹಾತ್ವಾಕಾಂಕ್ಷೆ ಇಲ್ಲದಿರುವುದು ಎಂದು ಹೇಳಲಾಗದು, ಬದಲಾಗಿ ಅವರು ಯಶಸ್ಸಿಗೆ ಹೊಸ ವ್ಯಾಖ್ಯಾನವನ್ನು ನೀಡುತ್ತಿದ್ದಾರೆ. ಸಾಂಕ್ರಾಮಿಕ ರೋಗದ ನಂತರದ ಅಧಿಕ ಹಣದುಬ್ಬರ ಮತ್ತು ಕೆಲಸದಿಂದ ತೆಗೆದು ಹಾಕುವ ಅರ್ಥವ್ಯವಸ್ಥೆಯಲ್ಲಿ ಇಂತಹ ಮನೋಭಾವ ಬೆಳೆದಿದೆ.

ವೃತ್ತಿಭದ್ರತೆಯಿಲ್ಲದ ಉದ್ಯೋಗಗಳು

ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸೌಮ್ಯ ಹೇಳುವ ಪ್ರಕಾರ, "ಸರಿಯಾದ ವೃತ್ತಿ ಭದ್ರತೆಯಿಲ್ಲದೆ, ಆರೋಗ್ಯ-ಸಮಯ ಲೆಕ್ಕಿಸದೆ ಕಾರ್ಪೊರೇಟ್ ಸಂಸ್ಥೆಗಳಲ್ಲಿ ದುಡಿಯುವುದಕ್ಕಿಂತ ನೆಮ್ಮದಿಯಿರುವ ಕೆಲಸ ಮಾಡುವುದು ಅತ್ಯಗತ್ಯ ಅಂತ ನನಗನಿಸುತ್ತದೆ. ಪ್ರೊಮೋಷನ್ ಎಂದರೆ ಹೆಚ್ಚಿನ ಜವಾಬ್ದಾರಿ, ವಿಪರೀತ ಒತ್ತಡ ಹಾಕುವ ತಂತ್ರ ಆಗಿದ್ದು, ನನ್ನನ್ನೂ ಸೇರಿದಂತೆ ನನ್ನ ಸ್ನೇಹಿತರ ವಲಯದಲ್ಲೇ ಎಷ್ಟೋ ಜನರಿಗೆ 30-40 ವಯಸ್ಸಿನೊಳಗೆ ಈಗ ಶುಗರ್-ಬಿಪಿ (ಮಧುಮೇಹ-ಅಧಿಕ ರಕ್ತದೊತ್ತಡ) ಬಂದಿದೆ. ಕುಟುಂಬದ ಜೊತೆ ದಿನಕ್ಕೆ ನಾಲ್ಕೈದು ಗಂಟೆಯಾದರೂ ಕಳೆದು, ವೈಯಕ್ತಿಕ ಆರೋಗ್ಯ, ವ್ಯಾಯಾಮ ಚಟುವಟಿಕೆಗಳು, ಸರಿಯಾದ ಆಹಾರ ಕ್ರಮ ರೂಢಿಸಿಕೊಳ್ಳಲು ಸಮಯ ಮಾಡಿಕೊಳ್ಳುವುದು ಅಗತ್ಯ. ಇವು ಹಲವಾರು ಕಾರ್ಪೊರೇಟ್ ಉದ್ಯೋಗಗಳಲ್ಲಿ ಸಿಗುವುದೇ ಇಲ್ಲ ಎಂದುಕೊಳ್ಳುತ್ತೇನೆ. ಬೆಂಗಳೂರಿನಂತಹ ನಗರಗಳಲ್ಲಿ 9 ಗಂಟೆ ಕೆಲಸವಾದರೆ, 2-3 ಗಂಟೆ ಪ್ರಯಾಣದ ಸಮಯದಲ್ಲೇ ಕಳೆದು ಹೋಗುತ್ತದೆ."

ಬದಲಾದ ಮಹಾತ್ವಾಕಾಂಕ್ಷೆಯ ದಿಕ್ಕು

ಜಾಗತಿಕ ಮಾನವ ಸಂಪನ್ಮೂಲ ಸಂಸ್ಥೆಯಾದ ರಾಂಡ್ಸ್ಟಡ್ನ ಇತ್ತೀಚೆಗಿನ ಕಾರ್ಯಪಡೆಯ ಡೇಟಾವು ಈ ಬದಲಾವಣೆಯನ್ನು ಪ್ರತಿಧ್ವನಿಸಿದೆ. "ಅರ್ಧಕ್ಕೂ ಹೆಚ್ಚು ಉದ್ಯೋಗಿಗಳು ಸ್ವತಃ 'ಮಹಾತ್ವಾಕಾಂಕ್ಷಿಗಳು' ಎಂದು ಹೇಳುತ್ತಿದ್ದಾರೆ. ಆದರೆ 'ಮಹಾತ್ವಾಕಾಂಕ್ಷೆ'ಯ ದಿಕ್ಕು ಬದಲಾಗಿದೆ. ಸ್ವಾಯತ್ತತೆ, ಹೊಂದಿಕೆಗೆ ಅವಕಾಶವಿರುವ ಕೆಲಸದ ವೇಳೆ ಮತ್ತು ಅರ್ಥಪೂರ್ಣ ಕೆಲಸ. ಹೀಗಾಗಿ ವೃತ್ತಿಪರ ಪ್ರಗತಿ ಇದೀಗ ಮೇಲ್ಮುಖವಾಗಿಲ್ಲ. ಭಾರತದಲ್ಲಿಯೂ ಐಟಿ, ಮಾಧ್ಯಮ, ಸ್ಟಾರ್ಟಪ್ಗಳು ಮತ್ತು ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಇದ್ದ ವೃತ್ತಿಸಂಸ್ಕೃತಿ ಇದೀಗ ಬದಲಾಗಿದೆ.

ಯುವ ಕೆಲಸಗಾರರು ಬಿಡುಗಡೆ ಬಯಸುತ್ತಿರುವುದೇಕೆ?

ಕಳೆದ 20 ವರ್ಷಗಳಿಂದ ಕಾರ್ಪೋರೇಟ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ದೀಪಕ್‌ ಹೇಳುವ ಪ್ರಕಾರ, "ಹೊಸ ತಲೆಮಾರಿನವರಲ್ಲಿ ಗಂಭೀರವಾದ ಅಧ್ಯಯನಶೀಲತೆ ಕೊರತೆ ಇದೆ. ಅವರು ತಾಂತ್ರಿಕವಾಗಿ ಹೆಚ್ಚು ಪಳಗಿರುತ್ತಾರೆ. ಎಳವೆಯಿಂದಲೇ ತಂತ್ರಜ್ಞಾನದಲ್ಲಿ ಹೆಚ್ಚಿನ ಪರಿಪಕ್ವತೆ ಹೊಂದಿರುವ ಕಾರಣ ಅವರು ಅನುಭವಕ್ಕಿಂತಲೂ ತಾಂತ್ರಿಕ ನೈಪುಣ್ಯವನ್ನು ನಂಬಿ ವೃತ್ತಿರಂಗಕ್ಕೆ ಬರುತ್ತಾರೆ. ಅವರು ರಜೆ ಅಥವಾ ಕೌಟುಂಬಿಕ ಬದುಕು ತ್ಯಜಿಸಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಿಂದಿನ ತಲೆಮಾರಿನವರು ಕತ್ತೆಯಂತೆ ದುಡಿದು ವೈಯಕ್ತಿಕ ಸಮಯವನ್ನೂ ಸಂಸ್ಥೆಗೆ ನೀಡುತ್ತಿದ್ದರು. ಅವರಿಗೆ ಸಿಗುತ್ತಿದ್ದ ಅಲ್ಪ ಸಂಬಳಕ್ಕೆ ಅದು ಅನಿವಾರ್ಯವಾಗಿತ್ತು. ಈಗ ಹಾಗಿಲ್ಲ. ಸಂಬಳದ ಪ್ರಮಾಣ ಸಹಜವಾಗಿ ಎಲ್ಲ ಕಡೆ ಜಾಸ್ತಿಯೇ ಇದೆ. ಹೀಗಾಗಿ ವಾರ ಪೂರ್ತಿ ದುಡಿದು ವಾರಾಂತ್ಯಗಳಲ್ಲಿ ಗಮ್ಮತು ಮಾಡಬೇಕು ಎಂಬುದು ಈಗಿನವರ ನಿಲುವು. ಈಗ ನಾವಿರುವುದು ಜಾಗತಿಕ ಹಳ್ಳಿಯಲ್ಲಿ! ಹಾಗಾಗಿ ನಮಗೆ ಔದ್ಯೋಗಿಕ ಅವಕಾಶ ವಿಶ್ವವ್ಯಾಪಿಯಾಗಿದೆ. ಈ ಕೆಲಸ ಅಲ್ಲದಿದ್ದರೆ ಮತ್ತೊಂದು ಎಂಬ ಆಯ್ಕೆ ಇದೆ. ನೀವು ವೃತ್ತಿ ನೈಪುಣ್ಯ ಹೊಂದಿದ್ದರೆ ಈಗ ಸಹಜವಾಗಿ ಇತರ ಸಂಸ್ಥೆಗಳವರು ನಿಮ್ಮನ್ನು ಕರೆದು ಕೆಲಸ ಕೊಡುತ್ತಾರೆ, ಹಾಗಾಗಿ, ಪದೇಪದೆ ಕೆಲಸ ಬದಲಾಯಿಸಿದರೆ ಸಂಬಳ ಜಂಪ್ ಆಗುವ ಸಾಧ್ಯತೆ, ಅವಕಾಶ ಇದೆ. ಜೊತೆಗೆ ಒಂದೇ ಕಡೆ ವರ್ಷಾನುಗಟ್ಟಲೆ ಕುಳಿತು ಕೆಲಸ ಮಾಡುವುದು ಈ ಯುಗದಲ್ಲಿ ಅನಿವವಾರ್ಯವೇನಲ್ಲ ಎಂಬುದು ಈಗಿನ ತಲೆಮಾರಿನ ನಂಬಿಕೆ."

ಕನಸಿನ ಉದ್ಯೋಗ ಎನ್ನುವ ಕನಸಿನ ಸಾವು

ಒಂದೇ ಕೆಲಸದಲ್ಲಿ ಜೀವನಪೂರ್ತಿ ಇರುವುದು ಎನ್ನುವ ಕಲ್ಪನೆಯೂ ನಶಿಸುತ್ತಿದೆ. ಕನಸಿನ ಉದ್ಯೋಗ ಎನ್ನುವ ಕನಸು ಇಂದಿನ ತಲೆಮಾರಿಗೆ ಇಲ್ಲ. ಒಂದೇ ಕಂಪನಿಯಲ್ಲಿ ಬೆಳೆಯುವ ಬದಲಾಗಿ ಒಂದು ವೃತ್ತಿಯ ಜೊತೆಗೆ ಪರ್ಯಾಯ ವೃತ್ತಿಗಳನ್ನು ಮಾಡುತ್ತಾ ಹೆಚ್ಚುವರಿ ಸಂಪಾದನೆ ಮಾಡುತ್ತಾರೆ. ಅಲ್ಲದೆ ಹೊಂದಾಣಿಕೆಯ ಕೆಲಸದ ವೇಳೆಯನ್ನೂ ಬಯುಸುತ್ತಿದ್ದಾರೆ. ಉದ್ಯೋಗದ ಜೊತೆ ಜೊತೆಗೆ ಉದ್ಯಮ, ಫ್ರೀಲ್ಯಾನ್ಸ್ ಕೆಲಸ, ಕಂಟೆಂಟ್ ಸೃಷ್ಟಿ ಮೊದಲಾಗಿ ಪರ್ಯಾಯ ಹಣದ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ Gen Z ತಮ್ಮ ಆರಂಭಿಕ ವೃತ್ತಿಯಲ್ಲಿ ಒಂದು ವರ್ಷಕ್ಕೆ ಮೇಲೆ ಕೆಲಸದಲ್ಲಿ ನಿಲ್ಲುವುದಿಲ್ಲ.

ಹಿಂದಿನ ತಲೆಮಾರಿಗೆ ಹೋಲಿಸಿದರೆ Gen Z ಉದ್ಯೋಗದಲ್ಲಿ ಮುಂದುವರಿಯುವ ಸಮಯ ಇನ್ನಷ್ಟು ಕಡಿತವಾಗಿದೆ. ಮಾನವ ಸಂಪನ್ಮೂಲ ಅಧಿಕಾರಿಗಳು ಹೇಳುವ ಪ್ರಕಾರ, ಇದು ಅಸಹನೆಯಲ್ಲ, ಪ್ರಯೋಗಕ್ಕೆ ಒಡ್ಡಿಕೊಳ್ಳುವುದು! "ಒಂದೇ ಕೆಲಸದಲ್ಲಿ ಮುಂದುವರಿಯುವುದು ಪ್ರಾಮಾಣಿಕತೆ ಎಂದು Gen Zಗೆ ಅನಿಸುತ್ತಿಲ್ಲ, ಬದಲಾಗಿ ಅಪಾಯ ಎಂದು ಪರಿಗಣಿಸುತ್ತಾರೆ. ಒಂದೆಡೆ ಸಿಲುಕಿಕೊಳ್ಳುವ ಬದಲಾಗಿ ಮುಂದಕ್ಕೆ ಹೆಜ್ಜೆ ಇಡಲು ಬಯಸುತ್ತಾರೆ" ಎನ್ನುತ್ತಾರೆ ಮಾನವ ಸಂಪನ್ಮೂಲ ತಜ್ಞರು.

ಮಹಾತ್ವಾಕಾಂಕ್ಷೆ ಇಲ್ಲದ ಕೆಲಸ ಹೇಗಿರುತ್ತದೆ?

• ಉದ್ಯೋಗಿಗಳು ದೀರ್ಘ ಅವಧಿ ಕೆಲಸ ಮಾಡಬೇಕೆಂದರೆ ಬಡ್ತಿ ಬೇಡ ಎಂದು ಹೇಳುತ್ತಿದ್ದಾರೆ.

• ಹೆಚ್ಚುವರಿ ವೇತನ ಅಥವಾ ಹೊಂದಾಣಿಕೆಯ ಕೆಲಸದ ವೇಳಾಪಟ್ಟಿ ಇಲ್ಲದಿದ್ದರೆ ನಾಯಕತ್ವ ಪಾತ್ರ ಬಯಸುವುದಿಲ್ಲ

• ಉತ್ತಮ ಕೆಲಸ ಮಾಡುವವರು ತಮ್ಮ ಪಾತ್ರಕ್ಕಷ್ಟೇ ಸೀಮಿತವಾಗಿರುತ್ತಾರೆ ಮತ್ತು ಹೆಚ್ಚು ಕೆಲಸ ಮಾಡಲು ಬಯಸುವುದಿಲ್ಲ

• ರಜಾಗಳು, ಕೆಲಸದ ಅವಧಿಯ ನಂತರ ಕರೆ ಸ್ವೀಕರಿಸದೆ ಇರುವುದು, ವೈಯಕ್ತಿಕ ಸಮಯದ ಶಿಸ್ತು ಪಾಲಿಸುತ್ತಾರೆ

ಉದ್ಯೋಗದಾತರಿಗೆ ಎಚ್ಚರಿಕೆಯ ಕರೆಗಂಟೆ

ಉದ್ಯೋಗದಾತರಿಗೆ ಇಂತಹ ಮಹತ್ವಾಕಾಂಕ್ಷೆಯ ಕೊರತೆ ದೊಡ್ಡ ಸವಾಲು ಒಡ್ಡಲಿದೆ. ಪಾರಂಪರಿಕ ಬಹುಮಾನದ ವ್ಯವಸ್ಥೆಗಳು ಅಂದರೆ ದೊಡ್ಡ ಹುದ್ದೆಯ ಹೆಸರು, ಭವಿಷ್ಯದ ಭರವಸೆಗಳು, ಅಸ್ಪಷ್ಟ ಬೆಳವಣಿಗೆಯ ಮಾರ್ಗಗಳು ಮೊದಲಾದವನ್ನು Gen Z ಕಾರ್ಮಿಕರು ಪ್ರೋತ್ಸಾಹಿಸುವುದಿಲ್ಲ. ಅವರಿಗೆ ನ್ಯಾಯಯುತ ವೇತನ ಸಿಗಬೇಕು, ತಮ್ಮ ಕೆಲಸದ ವ್ಯಾಪ್ತಿಯ ಬಗ್ಗೆ ಸ್ಪಷ್ಟತೆ ಇರಬೇಕು, ಮಾತಿನ ಭರವಸೆ ಬದಲು ನಿಜವಾದ ನಾಯಕತ್ವವನ್ನು ಬಯಸುತ್ತಾರೆ. ಮಹಾತ್ವಾಕಾಂಕ್ಷೆಯ ದಿಕ್ಕು ಬದಲಾಗಿರುವುದೆಂದರೆ ಕೆಲಸವನ್ನು ತಿರಸ್ಕರಿಸುವುದಲ್ಲ. ಏನೂ ಪ್ರತಿಫಲ ಸಿಗದೆ ಜೀವನವನ್ನು ಸುಸ್ತುಗೊಳಿಸುವ ಕೆಲಸವನ್ನು ತಿರಸ್ಕರಿಸುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries