ಕಾಸರಗೋಡು: ಕೇರಳ ಸರ್ಕಾರದ ಮಲಯಾಳ ಭಾಷಾ ಮಸೂದೆ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ಗಡಿನಾಡ ಕನ್ನಡಿಗರು ಮುಂದಾಗಿದ್ದು, ಮಾ. 28ರಂದು ಕಾಸರಗೋಡು ತಾಲೂಕು ಕಚೇರಿ ಎದುರು ಕನ್ನಡಿಗರ ಬೃಹತ್ ಪ್ರತಿಭಟನಾ ಸತ್ಯಾಗ್ರಹ ನಡೆಸುವುದರ ಜತೆಗೆ ಮಸೂದೆ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲು ತೀರ್ಮಾನಿಸಲಾಗಿದೆ.
ಕಾಸರಗೋಡು ಬೀರಂತಬೈಲಿನ ಕನ್ನಡ ಮಾಧ್ಯಮ ಅಧ್ಯಾಪಕರ ಭವನದಲ್ಲಿ ಕರ್ನಾಟಕ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಗಡಿನಾಡು ಕಾಸರಗೋಡಿನ ಕನ್ನಡಿಗ ಬಾಂಧವರು, ಅಧ್ಯಾಪಕರು, ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಈ ಸಭೆಯಲ್ಲಿ ಮಸೂದೆ ವಿರುದ್ಧ ಪ್ರಬಲ ಹೋರಾಟಕ್ಕೆ ಕಿಚ್ಚುಹಚ್ಚಲಾಯಿತು. ಭಾಷಾ ಮಸೂದೆ ವಿರುದ್ಧ ಪಂಚಾಯಿತಿ ಮಟ್ಟದಲ್ಲೂ ಹೋರಾಟ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು.
ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಮಸೂದೆಯಿಂದ ಕಾಸರಗೋಡಿನ ಕನ್ನಡಿಗರಿಗೆ ಉಂಟಾಗುವ ಅನ್ಯಾಯದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡುವ ಬಗ್ಗೆ ಸಮಿತಿ ರಚಿಸಲಾಯಿತು. ವಕೀಲ ಮುರಳೀಧರ ಬಳ್ಳಕ್ಕುರಾಯ, ನಿವೃತ್ತ ನ್ಯಾಯಾಧೀಶ ರಾಜ್‍ಕುಮಾರ್, ವಕೀಲ ಕೆ.ಶ್ರೀಕಾಂತ್, ಡಾ. ರತ್ನಾಕರ ಮಲ್ಲಮೂಲೆ, ನಿವೃತ್ತ ಶಿಕ್ಷಣ ಉಪನಿರ್ದೇಶಕ ಮಹಾಲಿಂಗೇಶ್ವರ ರಾಜ್, ನಿವೃತ್ತ ಡಿಇಓ ಮೋಹನ್‍ದಾಸ್, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ> ಆರ್ ಸುಬ್ಬಯ್ಯಕಟ್ಟೆ, ವಕೀಲರಾದ ಸುಬ್ಬಯ್ಯ ರೈ, ಮಹೇಶ್, ಸತ್ಯನಾರಾಯಣ, ನಿವೃತ್ತ ಎಇಓ ಯತೀಶ್ ಕುಮಾರ್ ರೈ ಅವರನ್ನೊಳಗೊಂಡ ಸಮಿತಿ ರಚಿಸಲಾಯಿತು.
ಮಸೂದೆ ಕಾಯ್ದೆಯಾಗಿ ಜಾರಿಗೊಂಡಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಮಲಯಾಳ ಕಲಿಯಬೇಕಾದ ಅನಿವಾರ್ಯತೆ ಎದುರಾಗುವ ಭೀತಿ ಎದುರಾಗಿದೆ. ಮಸೂದೆಯ ಕರಿನೆರಳಿನಲ್ಲಿ ಗಡಿನಾಡ ಕನ್ನಡಿಗರು ಕಾಲ ಕಳೆಯುತ್ತಿದ್ದು, ಕನ್ನಡ ಭಾಷೆ ಮತ್ತು ಸಂಸ್ಕøತಿಯ ಮೇಲೆ ಪ್ರಹಾರ ನಿಡಲಿರುವ ಈ ಮಸೂದೆಗೆ ಅಗತ್ಯ ತಿದ್ದುಪಡಿ ತರುವಂತೆ ಹೋರಾಟ ಮುಂದುವರಿಸಲಾಗುವುದು ಎಂದು ಕರ್ನಾಟಕ ಸಮಿತಿ ತಿಳಿಸಿದೆ.

