ಪೆರ್ಲ: ಎಣ್ಮಕಜೆ ಹಾಗೂ ಬದಿಯಡ್ಕ ಗ್ರಾಮ ಪಂಚಾಯಿತಿಯ ಸಂಗಮ ಪ್ರದೇಶ ನೆಲ್ಲಿಕುಂಜೆಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮಾ. 29ರಿಂದ ಏ. 3ರ ವರೆಗೆ ಜರುಗಲಿದೆ. ಎಣ್ಮಕಜೆ, ಪಡ್ರೆ, ಬದಿಯಡ್ಕ, ಕುಂಬ್ಡಾಜೆ ಗ್ರಾಮಗಳನ್ನೊಳಗೊಂಡ ಚೌಗ್ರಾಮ ದೇವಸ್ಥಾನ ಇದಾಗಿದ್ದು, ದೇಲಂಪಾಡಿ ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿರುವುದಾಗಿ
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ದಿವ್ಯಾನುಗ್ರಹ, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪೂರ್ಣಾನುಗ್ರಹ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನ ಹಾಗೂ ಜಿರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯಾನುಗ್ರಹದೊಂದಿಗೆ ಕಾರ್ಯಕ್ರಮ ನಡೆಯುವುದು.
ದೇವಸ್ಥಾನಕ್ಕೆ 800ವರ್ಷಕ್ಕೂ ಹೆಚ್ಚಿನ ಇತಿಹಾಸವಿದ್ದು,1934ರಲ್ಲಿ ಬ್ರಹ್ಮಕಲಶ ನಡೆದಿರುವ ಬಗ್ಗೆ ಮಾಹಿತಿಯಿದ್ದು, 90ವರ್ಷಗಳ ನಂತರ ನವೀಕರಣ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ನಡೆಯುತ್ತಿದೆ. ಮಾ. 29ರಂದು ಬೆಳಗ್ಗೆ 10ಕ್ಕೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನೆಲ್ಲಿಕುಂಜೆ ಕ್ಷೇತ್ರಕ್ಕೆ ಹೊರಡುವುದು. ಸಂಜೆ 5ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 7ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯುವುದು.
ಪ್ರತಿ ದಿನ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವುದು. 30ರಂದು ಸಂಜೆ 4ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಉಪನ್ಯಾಸಕ ಡಾ. ರವೀಶ ಪಡುಮಲೆ ಧಾರ್ಮಿಕ ಭಾಷಣ ಮಾಡುವರು.
3ರಂದು ಬೆಳಗ್ಗೆ 5ಕ್ಕೆ 108ಕಾಯಿ ಗಣಪತಿ ಹೋಮ, ಪ್ರತಿಷ್ಠಾ ಪಾಣಿ,9.21ರ ವೃಷಭಲಗ್ನ ಸುಮುಹೂರ್ತದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯುವುದು
ಮಧ್ಯಾಹ್ನ 3ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡುವರು. ಶೃಂಗೇರಿ ಶ್ರೀಶಾರದಾಪೀಠ ಕೋಟೆಕಾರು ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಹಗೂ ಕರ್ನಾಟಕ ಬ್ಯಾಂಕ್ ಎಂಡಿ ರಾಘವೇಂದ್ರ ಶ್ರೀನಿವಾಸ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದುತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮಾನಾಥ ರೈ ಮೇಗಿನ ಕಡಾರು, ಡಾ. ಮೇಘಶ್ಯಾಂ ನೆಲ್ಲಿಕುಂಜೆ, ಗೋಪಾಲಕೃಷ್ಣ ಶರ್ಮ ಸರವು, ಮಹೇಶ್ ಗುತ್ತು, ಶ್ರೀಕೃಷ್ಣ ಭಟ್ ಶಿರಂತಡ್ಕ, ದಾಸಪ್ಪ ರೈ ನೆಲ್ಲಿಕುಂಜೆ, ಡಾ. ಸತೀಶ್ ಪುಣಿಂಚಿತ್ತಾಯ, ರಾಜಶೇಖರ್ ನೆಲ್ಲಿಕುಂಜೆ ಉಪಸ್ಥಿತರಿದ್ದರು.

