ಬೆಂಗಳೂರು: ನ್ಯಾಯಾಂಗದ ಮೂಲ ತತ್ವಕ್ಕೆ ಹಾನಿಯಾಗದಂತೆ, ವ್ಯವಸ್ಥೆಯ ಬಲವರ್ಧನೆ ಸಲುವಾಗಿ ಮಾತ್ರವೇ ಕೃತಕ ಬುದ್ಧಿಮತ್ತೆಯನ್ನು (ಎಐ) ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಸಹಯೋಗದಲ್ಲಿ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಿದ್ದ ʼಕೃತಕ ಬುದ್ಧಿಮತ್ತೆ - ವಿವಾದಗಳ ಪರಿಹಾರ ಮತ್ತು ತಡೆಗಟ್ಟುವಿಕೆʼ ಕುರಿತ ವಿಚಾರ ಸಂಕೀರ್ಣದಲ್ಲಿ ಮಾತನಾಡಿರುವ ನ್ಯಾ.
ಸೂರ್ಯ ಕಾಂತ್, ಎಐ ಅನ್ನು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಹಾಗೂ ದೊಡ್ಡ ದೊಡ್ಡ ದಾಖಲೆಗಳನ್ನು ನಿರ್ವಹಿಸುವ ಸಲುವಾಗಿ ಬಳಕೆ ಮಾಡಬೇಕೇ ಹೊರತು, ತೀರ್ಪು ನೀಡುವುದಕ್ಕೆ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
ʼದೊಡ್ಡ ಪ್ರಮಾಣದಲ್ಲಿರುವ ಅಂಕಿ-ಅಂಶಗಳು, ದಾಖಲೆಗಳನ್ನು ನಿರ್ವಹಿಸಲು ಹಾಗೂ ವಿಳಂಬವಾಗದಂತೆ ನೋಡಿಕೊಳ್ಳಲು ಎಐ ನೆರವಾಗಬೇಕು. ಆದರೆ, ತೀರ್ಪುಗಳನ್ನು ಪ್ರಕಟಿಸುವ ನ್ಯಾಯಾಂಗದ ಕಾರ್ಯವನ್ನೇ ಅದು ಅತಿಕ್ರಮಿಸಬಾರದುʼ ಎಂದಿದ್ದಾರೆ.
ಬಳಕೆ ಹೆಚ್ಚಾದಂತೆ, ನಿರ್ಧಾರ ಕೈಗೊಳ್ಳುವಿಕೆಯಲ್ಲೂ ಎಐ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದು, ನ್ಯಾಯ ದಾನದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಅದೇ ಕಾರಣಕ್ಕೆ, ತೀರ್ಪು ಪ್ರಕಟಿಸುವ ಅಂತಿಮ ತೀರ್ಮಾನವು ಮನುಷ್ಯರಿಂದಲೇ ಆಗಬೇಕು ಎಂತಿ ಒತ್ತಿ ಹೇಳಿದ್ದಾರೆ.
ʼಎಐ ಒಂದು ಸಾಧನವಷ್ಟೇʼ ಎಂದಿರುವ ಅವರು, ʼಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಬುದ್ಧಿವಂತಿಕೆಯಿಂದ ನಿರ್ಧರಿಸಬೇಕುʼ ಎಂದೂ ಸಲಹೆ ನೀಡಿದ್ದಾರೆ.

