ಪಟ್ನಾ: ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಿಹಾರದ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು (ಗುರುವಾರ) ಘೋಷಿಸಿದ್ದಾರೆ.
ಇದರೊಂದಿಗೆ ಬಿಹಾರದಲ್ಲಿ ದೀರ್ಘಕಾಲ ಸಿಎಂ ಹುದ್ದೆ ಅಲಂಕರಿಸಿದ್ದ ನಿತೀಶ್ ಅವರ ಅಧಿಕಾರವಾಧಿಗೆ ತೆರೆ ಬೀಳಲಿದೆ.
ಅಲ್ಲದೆ ಬಿಹಾರದಲ್ಲಿ 2005ರಿಂದ ಅಧಿಕಾರದಲ್ಲಿರುವ ಸಿಎಂ ನಿತೀಶ್ ಅವರ ರಾಜ್ಯಸಭೆ ಪ್ರವೇಶಕ್ಕೆ ವೇದಿಕೆ ಸಿದ್ಧಗೊಂಡಿದೆ.
'ರಾಜ್ಯದಲ್ಲಿ ರಚನೆಯಾಗಿರುವ ನೂತನ ಸರ್ಕಾರಕ್ಕೆ ತಮ್ಮ ಸಂಪೂರ್ಣ ಬೆಂಬಲ, ಸಹಕಾರ ಹಾಗೂ ಮಾರ್ಗದರ್ಶನ ಇರಲಿದೆ' ಎಂದು ಅವರು ಹೇಳಿದ್ದಾರೆ.
'ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನೀವು ನನ್ನ ಮೇಲೆ ನಿರಂತರ ನಂಬಿಕೆಯನ್ನು ಇರಿಸಿದ್ದೀರಿ, ಬೆಂಬಲವನ್ನು ನೀಡಿದ್ದೀರಿ. ಆ ನಂಬಿಕೆಯ ಆಧಾರದಲ್ಲಿಯೇ ಸಂಪೂರ್ಣ ಅರ್ಪಣಾ ಮನೋಭಾವದಿಂದ ನಾನು ಕೆಲಸ ನಿರ್ವಹಿಸಿದ್ದೇನೆ. ನಿಮ್ಮ ನಂಬಿಕೆ ಹಾಗೂ ಬೆಂಬಲದಿಂದಾಗಿ ಬಿಹಾರವು ಅಭಿವೃದ್ಧಿಯ ಹೊಸ ಆಯಾಮ ತೆರೆದುಕೊಂಡಿದ್ದು, ಘನತೆಯನ್ನು ಪಡೆದುಕೊಂಡಿದೆ' ಎಂದು ರಾಜ್ಯದ ಜನತೆಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
'ನಿಮ್ಮೊಂದಿಗಿನ ನನ್ನ ಬಾಂಧವ್ಯವು ಭವಿಷ್ಯದಲ್ಲಿಯೂ ಸಂಪೂರ್ಣ ಪ್ರಮಾಣಿಕತೆಯಿಂದ ಮುಂದುವರಿಯಲಿದೆ ಎಂದು ಭರವಸೆ ನೀಡಲು ಬಯಸುತ್ತೇನೆ. ಅಭಿವೃದ್ಧಿ ಹೊಂದಿದ ಬಿಹಾರವನ್ನು ಕಟ್ಟಲು ಒಗ್ಗಟ್ಟಾಗಿ ಕೆಲಸ ಮಾಡುವ ಸಂಕಲ್ಪವು ಅಚಲವಾಗಿರಲಿದೆ. ಬಿಹಾರದಲ್ಲಿ ರಚನೆಯಾಗಲಿರುವ ನೂತನ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ಇರಲಿದೆ' ಎಂದಿದ್ದಾರೆ.
'ಸಂಸದೀಯ ಬದುಕಿನ ಆರಂಭದಿಂದಲೂ ಬಿಹಾರದ ಉಭಯ ಸದನ ಹಾಗೂ ಸಂಸತ್ತಿನ ಉಭಯ ಸದನಗಳ ಸದಸ್ಯರಾಗಲು ಬಯಸಿದ್ದೆ' ಎಂದು ನಿತೀಶ್ ತಿಳಿಸಿದ್ದಾರೆ.
'ತಮ್ಮ ಈ ಆಕಾಂಕ್ಷೆಯನ್ನು ಈಡೇರಿಸುವ ಸಲುವಾಗಿ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಸದಸ್ಯರಾಗಲು ಬಯಸುತ್ತೇನೆ' ಎಂದು ಹೇಳಿದ್ದಾರೆ.
ಬಿಜೆಪಿಗೆ ಮುಂದಿನ ಸಿಎಂ ಸ್ಥಾನ?
ನಿತೀಶ್ ಕುಮಾರ್ ರಾಜ್ಯಸಭೆಗೆ ಪ್ರವೇಶಿಸುವುದರೊಂದಿಗೆ ಬಿಹಾರದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಭಯಭೇರಿ ಗಳಿಸಿತ್ತು. ಈಗ ಬಿಜೆಪಿಯ ನಾಯಕರೊಬ್ಬರು ಸಿಎಂ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.
ಬಿಹಾರದ ಐದು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಮತದಾನ ನಡೆಯಲಿದೆ. ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

