HEALTH TIPS

ತಮಿಳುನಾಡು ವಿಧಾನಸಭೆ ಚುನಾವಣೆ: ಮೈತ್ರಿಗೆ ಡಿಎಂಕೆ, ಕಾಂಗ್ರೆಸ್ ಮುದ್ರೆ

ಚೆನ್ನೈ: ಹಲವು ಸುತ್ತಿನ ಮಾತುಕತೆ, ಚರ್ಚೆ ಬಳಿಕ ಆಡಳಿತಾರೂಢ ಡಿಎಂಕೆ ಹಾಗೂ ಮಿತ್ರ ಪಕ್ಷ ಕಾಂಗ್ರೆಸ್‌ ಸೀಟು ಹಂಚಿಕೆಯನ್ನು ಬುಧವಾರ ಅಂತಿಮಗೊಳಿಸಿವೆ.

ಕಾಂಗ್ರೆಸ್‌ ಪಕ್ಷಕ್ಕೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 28 ಸ್ಥಾನ ಹಾಗೂ ರಾಜ್ಯಸಭೆ ಚುನಾವಣೆಗೆ ಒಂದು ಸ್ಥಾನವನ್ನು ಡಿಎಂಕೆ ಬಿಟ್ಟುಕೊಟ್ಟಿದೆ.

ಈ ಮೂಲಕ, ಉಭಯ ಪಕ್ಷಗಳು ಮೈತ್ರಿಗೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ.

ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್‌ ಚೋಡನಕರ್‌ ಸಮ್ಮುಖದಲ್ಲಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಹಾಗೂ ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕೆ.ಸೆಲ್ವ ಪೆರುಂತಗೈ ಅವರು ಸೀಟು ಹಂಚಿಕೆ ಕುರಿತ ಒಪ್ಫಂದಕ್ಕೆ ಸಹಿ ಹಾಕಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೆಲ್ವ ಪೆರುಂತಗೈ,'ಸೀಟು ಹಂಚಿಕೆಗೆ ಸಂಬಂಧಿಸಿ ಒಪ್ಪಂದಕ್ಕೆ ಸಹಿ ಹಾಕಿರುವುದು ಖುಷಿ ತಂದಿದೆ. ಸೀಟು ಹಂಚಿಕೆ ವಿಚಾರವಾಗಿ ಡಿಎಂಕೆ ಹಾಗೂ ಕಾಂಗ್ರೆಸ್‌ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಂಡಿವೆ' ಎಂದರು.

ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಚೋಡನಕರ್‌ ಇತ್ತೀಚೆಗೆ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳು ಡಿಎಂಕೆ ಕೆರಳುವಂತೆ ಮಾಡಿದ್ದವು. 'ಟಿವಿಕೆ ನಾಯಕ ಹಾಗೂ ನಟ ವಿಜಯ್‌ ಅವರಿಗೆ ಕಾಂಗ್ರೆಸ್‌ನ ಶಕ್ತಿ ಏನು ಎಂಬುದು ಮನವರಿಕೆಯಾಗಿದೆ' ಎಂದು ಚೋಡನಕರ್‌ ಭಾನುವಾರ ಹೇಳಿದ್ದರು. ಇದಕ್ಕೆ ಡಿಎಂಕೆ ಆಕ್ಷೇಪಿಸಿತ್ತು. ಈ ಕಾರಣಕ್ಕೆ, ಸೀಟು ಹಂಚಿಕೆ ಕುರಿತಂತೆ ನಡೆದ ಅಂತಿಮ ಸುತ್ತಿನ ಮಾತುಕತೆಯಿಂದ ಚೋಡನಕರ್‌ ಅವರನ್ನು ಹೊರಗಿಡಲಾಗಿತ್ತು.

ಚೋಡನಕರ್‌ ಹೇಳಿಕೆಯಿಂದ ಸಿಟ್ಟಾಗಿದ್ದ ಡಿಎಂಕೆ, ಸೀಟು ಹಂಚಿಕೆ ಕುರಿತ ಮಾತುಕತೆಯನ್ನು ಸ್ಥಗಿತಗೊಳಿಸಿತ್ತು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕಿ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು.

ಡಿಎಂಕೆ ಜೊತೆಗಿನ 22 ವರ್ಷಗಳ ಮೈತ್ರಿಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ, ಡಿಎಂಕೆ ಜೊತೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಅವರಿಗೆ ನೀಡಿದ್ದರು.

ಸ್ಟಾಲಿನ್ ಅವರನ್ನು ಮಂಗಳವಾರ ಭೇಟಿ ಮಾಡಿದ್ದ ಚಿದಂಬರಂ, ಕೊನೆಗೂ ಪಕ್ಷಕ್ಕೆ 28 ಸೀಟು ಹಂಚಿಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ಮೀನಾಕ್ಷಿ ಕಣಕ್ಕೆ?

ತಮಿಳುನಾಡಿನಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಮೀನಾಕ್ಷಿ ನಟರಾಜನ್ ಅವರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ ಎಐಸಿಸಿಯ ತೆಲಂಗಾಣ ಉಸ್ತುವಾರಿಯಾಗಿರುವ ಮೀನಾಕ್ಷಿ ನಟರಾಜನ್ ಮೂಲತಃ ತಮಿಳುನಾಡಿನವರು. ತಮಿಳುನಾಡಿನೊಂದಿಗಿನ ಈ ನಂಟು ಚುನಾವಣೆಯಲ್ಲಿ ಅವರ ಗೆಲುವಿಗೆ ನೆರವಾಗಬಲ್ಲದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದು ಎಂದು ಇವೇ ಮೂಲಗಳು ಹೇಳಿವೆ. ತಮಿಳುನಾಡಿನ ನಾಯಕರೊಬ್ಬರನ್ನೇ ಕಣಕ್ಕೆ ಇಳಿಸಬೇಕು ಎಂಬುದು ಪಕ್ಷದ ಕೆಲ ನಾಯಕರ ಒತ್ತಾಯವಾಗಿದೆ ಎಂದೂ ಮೂಲಗಳು ಹೇಳಿವೆ.

ರಾಹುಲ್‌ಗೆ ಅಸಮಾಧಾನ?

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ 28 ಸೀಟುಗಳನ್ನು ಹಂಚಿಕೆ ಮಾಡಿರುವುದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. 2016ರಲ್ಲಿ ಪಕ್ಷಕ್ಕೆ 41 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. ಈಗಲೂ ಅಷ್ಟೇ ಸೀಟುಗಳು ಹಂಚಿಕೆಯಾಗಬೇಕು ಎಂಬ ಕಾಂಗ್ರೆಸ್‌ ಮನವಿಗೆ ಡಿಎಂಕೆ ಸ್ಪಂದಿಸಿಲ್ಲ ಎಂಬುದೇ ರಾಹುಲ್‌ ಗಾಂಧಿ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries