ಕುಂಬಳೆ: ನಾರಾಯಣಮಂಗಲ ಸಮೀಪದ ಕಾನ ಶ್ರೀ ಶಂಕರನಾರಾಯಣ ದೇವರ ಮಠದಲ್ಲಿ ವಾರ್ಷಿಕ ಹೊಸ್ತಿನ ದೇವಕಾರ್ಯ ಮತ್ತು ಶ್ರೀ ಧೂಮಾವತೀ ದೈವದ ಕೋಲ ನಡೆಯುತ್ತಿದೆ.
ನಿನ್ನೆ ಬೆಳಿಗ್ಗೆ 6.30ಕ್ಕೆ ಆಚಾರ್ಯರಿಂದ ಗಣಪತಿ ಹವನ, ಪಂಚಗವ್ಯ ಹವನ, ಕಲಶಾಭಿಷೇಕ ನಡೆಯಿತು. ಬಳಿಕ 8 ರಿಂದ ಸಾಮೂಹಿಕ ರುದ್ರ ಪಾರಾಯಣ, 10.30ಕ್ಕೆ ತುಲಾಭಾರ ಸೇವೆ, 11ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ದೇವಕಾರ್ಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 7.30ಕ್ಕೆ ಭಂಡಾರ ಕೊಟ್ಟಿಗೆಯಿಂದ ಶ್ರೀಧೂಮಾವತೀ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಲ ಮುಗಿಸಿ ಶ್ರೀಮಠಕಕೆ ಆಗಮನ, ದೇವರ ಮಹಾಪೂಜೆ, ಶ್ರೀಧೂಮಾವತೀ ದೈವದ ತೊಡಂಙಲ್ ನಡೆಯಿತು.
ಇಂದು(ಶನಿವಾರ) ಬೆಳಿಗ್ಗೆ 9.30 ರಿಂದ ಶ್ರೀಧೂಮಾವತೀ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.
ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ 7ಕ್ಕೆ ಶ್ರೀಧೂಮಾವತೀ ಸನ್ನಿಧಿಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, 10ಕ್ಕೆ ಶ್ರೀದೇವರ ಮಠದಲ್ಲಿ ಕೊಪ್ಪರಿಗೆ ಮುಹೂರ್ತ ನಡೆಯಲಿದೆ.
ಕುಂಬಳೆ ಸೀಮೆಯ ಹವ್ಯಕ ವಿಭಾಗದವರು ಶತಮಾನಗಳಿಂದ ಆರಾಧಿಸಿಕೊಂಡುಬರುತ್ತಿರುವ ಈ ಕ್ಷೇತ್ರದ ಆರಾಧಕರಾಗಿ ಕರ್ನಾಟಕ, ಕೇರಳದಾದ್ಯಂತ ಸಾವಿರಾರು ಮನೆಗಳು ನಂಬಿಕೊಂಡುಬರುತ್ತಿದ್ದು, ಶುಕ್ರವಾರ ಕಾರ್ಯಕ್ರಮಗಳಲ್ಲಿ ಎರಡೂವರೆ ಸಾವಿರಕ್ಕೂ ಮಿಕ್ಕಿದ ಜನರು ಪಾಲ್ಗೊಂಡರು.




