ನವದೆಹಲಿ: ಎಡಪಂಥೀಯ ಉಗ್ರವಾದದಿಂದ ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ಪ್ರಯತ್ನಗಳ ಕುರಿತು ಲೋಕಸಭೆಯಲ್ಲಿ ಸೋಮವಾರ ಚರ್ಚೆ ನಡೆಯಲಿದೆ. ಲೋಕಸಭೆ ಸಚಿವಾಲಯವು ಈ ವಿಷಯವನ್ನು ಚರ್ಚೆಗೆ ಪಟ್ಟಿ ಮಾಡಿದೆ.
ಭಾರತವನ್ನು ನಕ್ಸಲ್ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸರ್ಕಾರವು ನೀಡಿದ್ದ ಗಡುವು ಮಾರ್ಚ್ 31ರಂದು ಮುಗಿಯಲಿದೆ.
ಮಾರ್ಚ್ 31ರ ವೇಳೆಗೆ ನಕ್ಸಲ್ ಮುಕ್ತಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು.
ಟಿಡಿಪಿ ಸಂಸದ ಬೈರೆಡ್ಡಿ ಶಬರಿ ಹಾಗೂ ಶಿವಸೇನಾ ಸಂಸದ ಶ್ರೀಕಾಂತ ಶಿಂಧೆ ಅವರು ಚರ್ಚೆಯನ್ನು ಪ್ರಾರಂಭಿಸಲಿದ್ದಾರೆ.
ಎಡಪಂಥೀಯ ಉಗ್ರವಾದವಿರುವ ದೇಶದ ಜಿಲ್ಲೆಗಳ ಸಂಖ್ಯೆಯು ಎಂಟರಿಂದ ಏಳಕ್ಕೆ ಇಳಿಕೆಯಾಗಿದೆ.
2004ರಿಂದ ಈ ವರ್ಷ ಮಾರ್ಚ್ 26ರವರೆಗೆ ದೇಶದಲ್ಲಿ ಒಟ್ಟು 16,496 ನಕ್ಸಲರು ಶರಣಾಗಿದ್ದಾರೆ. ಕಳೆದ ವರ್ಷ ಗರಿಷ್ಠ 2,337 ನಕ್ಸಲರು ಶರಣಾಗಿದ್ದಾರೆ.

