ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಂತಟ್ಟ ಎರಿಞÂಪುಳ ಹೌಸ್ ನಿವಾಸಿ ಸಿ. ಬಾಲನ್ ಅವರ ಪುತ್ರ ಜಿತೇಶ್(32)ಮನೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಮನೆಯಿಂದ ಬೈಕಲ್ಲಿ ತೆರಳಿದ್ದ ಜಿತೇಶ್ ಸಂಜೆಯಾದರೂ ವಾಪಸಾಗಿರಲಿಲ್ಲ. ಈತನ ಮೊಬೈಲ್ ಮನೆಯಲ್ಲೇ ಕಂಡುಬಂದಿದ್ದು, ಕೊಠಡಿಯಲ್ಲಿ ಈತ ಬರೆದಿಟ್ಟಿದ್ದಾನೆನ್ನಲಾದ ಪತ್ರವೊಂದು ಲಭಿಸಿದೆ. ಇದರಲ್ಲಿ 'ಇಲ್ಲಿನ ಜೀವನ ಸಾಕಾಗಿದೆ, ಮನಸ್ಸಿಗೆ ಸಮಾಧಾನವಿಲ್ಲ. ಸ್ವಲ್ಪ ಕಾಲ ಯಾತ್ರೆ ಹೋಗುತ್ತಿದ್ದೇನೆ. ತನ್ನನ್ನು ಹುಡುಕಬೇಡಿ, ತನ್ನ ಹಿಂದೆ ಬಂದರೆ ತಾನಿರಲಾರೆ'ಎಂದು ಪತ್ರದಲ್ಲಿ ಬರೆಯಲಾಗಿತ್ತು. ಜಿತೇಶ್ ಕರ್ನಾಟಕಕ್ಕೆ ತೆರಳಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು, ಈ ಬಗ್ಗೆ ಬೇಡಡ್ಕ ಠಾಣೆ ಪೊಲೀಸರು ಕರ್ನಾಟಕದ ಠಾಣೆಗಳಿಗೂ ಮಾಹಿತಿ ನೀಡಿದ್ದಾರೆ.

