ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ನಟ್ಟಿಕಾ ವಿಧಾನಸಭಾ ಕ್ಷೇತ್ರದಲ್ಲಿ ತನ್ನನ್ನು ಮತ್ತೊಮ್ಮೆ ಅಭ್ಯರ್ಥಿಯಾಗಿ ಪರಿಗಣಿಸದೆ ಮಾಜಿ ಶಾಸಕಿ ಗೀತಾ ಗೋಪಿ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಸಿಪಿಐ ವಿರುದ್ಧ ಕಿಡಿಕಾರಿದ ಬಳಿಕ ಮುಕುಂದನ್ ಅವರನ್ನು ಕಳೆದ ವಾರ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಈ ಹಿಂದೆ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿದ್ದ ಮುಕುಂದನ್, ದಿಲ್ಲಿಯಲ್ಲಿ ಪಕ್ಷದ ನಾಯಕರನ್ನೂ ಭೇಟಿಯಾಗಿದ್ದರು.
ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಎ.ಎನ್. ರಾಧಾಕೃಷ್ಣನ್ ಮತ್ತು ಬಿ. ಗೋಪಾಲಕೃಷ್ಣನ್ ಅವರ ಉಪಸ್ಥಿತಿಯಲ್ಲಿ ಮುಕುಂದನ್ ಕೇಸರಿ ಪಾಳಯವನ್ನು ಸೇರಿದರು.
ಬಿಜೆಪಿಯು ಎಸ್ಸಿ/ಎಸ್ಟಿ ಸಮುದಾಯಗಳ ಹಿತಾಸಕ್ತಿಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ ಮುಕುಂದನ್, 'ಇನ್ನಷ್ಟು ಬದಲಾವಣೆಗಳಾಗುತ್ತವೆ ಎಂಬ ನಿರೀಕ್ಷೆಯೊಂದಿಗೆ ನಾನು ಪಕ್ಷವನ್ನು ಸೇರಿದ್ದೇನೆ. ಜನರ ಹಿತಾಸಕ್ತಿಗಳ ರಕ್ಷಣೆ ಮತ್ತು ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ನನ್ನ ದೊಡ್ಡ ಆಸೆಯಾಗಿದೆ' ಎಂದರು.
ಬಿಜೆಪಿಗೆ ನಿಷ್ಠನಾಗಿರುವುದಾಗಿ ತಾನು ಪ್ರತಿಜ್ಞೆ ಮಾಡಿದ್ದೇನೆ ಎಂದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ತಾನು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದನ್ನು ಒಪ್ಪಿಕೊಂಡ ಅವರು, ಆದರೆ ತನ್ನ ನಡೆ ವಿಫಲವಾಗಿದ್ದು ಏಕೆ ಎನ್ನುವುದು ತನಗೆ ಗೊತ್ತಿಲ್ಲ ಎಂದರು.

