ಕಾಸರಗೋಡು: ಉಪ್ಪಳ ಪೇಟೆಯಲ್ಲಿ ಮಾರಕ ಮಾದಕ ವಸ್ತು ಎಂಡಿಎಂಎ ಸಾಗಾಟಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಉಪ್ಪಳ ಮಣಿಮುಂಡ ಬದರ್ ಮಂಜಿಲ್ ನಿವಾಸಿ ಮೊಹಮ್ಮದ್ ಶಮೀರ್ (41)ಗೆ ಕಾಸರಗೋಡು ಹೆಚ್ಚುವರಿಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ದ್ವಿತೀಯ) ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ, ಎರಡು ತಿಂಗಳು ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ.
ಆಗಸ್ಟ್ 26, 2021 ರಂದು ರಾತ್ರಿ 11.30ಕ್ಕೆ ಉಪ್ಪಳ ಪೇಟೆಯಲ್ಲಿ ಮಂಜೇಶ್ವರ ಠಾಣೆಯ ಅಂದಿನ ಸಬ್‍ಇನ್ಸ್‍ಪೆಕ್ಟರ್ ಎ. ಬಾಲಚಂದ್ರನ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಶಮೀರ್‍ನನ್ನು ಸೆರೆಹಿಡಿದು ತಪಾಸಣೆಗೊಳಪಡಿಸಿದಾಗ 11 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಈ ಬಗ್ಗೆ ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್ ಎ. ಸಂತೋಷ್ ಕುಮಾರ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.


