ಮಧೂರು: 'ಮನೋಹರ ಮಧೂರ' ಎಂಬ ಗುರಿಯೊಂದಿಗೆ ಮಧೂರು ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಬಜೆಟ್ ಅನ್ನು ಮಂಡಿಸಲಾಯಿತು. ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಕೆ.ಭಾನುಪ್ರಕಾಶ್ ಬಜೆಟ್ ಮಂಡಿಸಿದರು.
ಅಧ್ಯಕ್ಷೆ ಸುಜ್ಞಾನಿ ಎಸ್.ಶಾನಬೋಗ್ ಅಧ್ಯಕ್ಷತೆ ವಹಿಸಿದ್ದರು.ಈ ಹಣಕಾಸು ವರ್ಷದಲ್ಲಿ ರಚಿಸಲಾದ ಯೋಜನೆಗಳು ದೀರ್ಘಾವಧಿಯದ್ದಾಗಿದ್ದು, ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬಹುದು ಎಂದು ಉಪಾಧ್ಯಕ್ಷರು ಹೇಳಿದರು.
ಒಟ್ಟು 34.80 ಕೋಟಿ ರೂ. ಆದಾಯ, 26.24 ಕೋಟಿ ರೂ. ಖರ್ಚು ಅಂದಾಜಿಸಿರುವ 8.55 ಕೋಟಿ ರೂ. ಮೊತ್ತದ ಮಿಗತೆ ಬಜೆಟ್ ಇದಾಗಿದೆ. 9.19 ಕೋಟಿ ರೂ. ವಾರ್ಷಿಕ ಯೋಜನಾ ವೆಚ್ಚಕ್ಕಾಗಿ ಹಂಚಿಕೆ ಮಾಡಲಾಗಿದ್ದು, ಸಾಮಾನ್ಯ ವರ್ಗಕ್ಕೆ 4.37 ಕೋಟಿ ರೂ., ಪರಿಶಿಷ್ಟ ಜಾತಿ ಘಟಕ ಯೋಜನೆಗೆ 57.91 ಲಕ್ಷ ರೂ. ಮತ್ತು ಪರಿಶಿಷ್ಟ ಪಂಗಡ ಘಟಕ ಯೋಜನೆಗೆ 15.04 ಲಕ್ಷ ರೂ. ಮೀಸಲಿಡಲಾಗಿದೆ.
ನಿರ್ವಹಣಾ ಅನುದಾನದನ್ವಯ ರಸ್ತೆಗಳಿಗೆ 2.24 ಕೋಟಿ ರೂ. ಮತ್ತು ಇತರ ವರ್ಗಗಳಿಗೆ 88.24 ಲಕ್ಷ ರೂ.ಮಂಜೂರು ಮಾಡಲಾಗಿದೆ. ಕೃಷಿ ವಲಯಕ್ಕೆ ರೂ. 1.02 ಕೋಟಿ ಹಂಚಿಕೆ ಮಾಡಲಾಗಿದೆ. ಕಾಡು ಪ್ರಾಣಿಗಳ ಉಪಟಳ ತಡೆಗಟ್ಟಲು ಸೌರ ಬೇಲಿ ನಿರ್ಮಾಣಕ್ಕೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಅಡಕೆ ಕೃಷಿಯ ಮೇಲೆ ಪರಿಣಾಮ ಬೀರುವ ಹಳದಿ ಎಲೆ ಚುಕ್ಕೆ ರೋಗ ಮತ್ತು ಹಾನಿಗೊಳಗಾದವರಿಗೆ ಔಷಧಕ್ಕಾಗಿ ಶೇ. 100 ರಷ್ಟು ಸಹಾಯಧನ ಮೀಸಲಿರಿಸಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುಷ್ಪಾ ಗೋಪಾಲನ್, ಮಾಧವ ಮಾಸ್ಟರ್, ಕೆ.ಪಿ. ದಾಕ್ಷಾಯಣಿ, ಗ್ರಾಪಂ ಸದಸ್ಯರಾದ ಮಜೀದ್ ಪಟ್ಲ, ಎಂ.ಆರ್.ಯೋಗಿಶ, ಅಮೀರ ರೆಹನಾಜ್, ಯೋಜನಾ ಸಮಿತಿ ಉಪಾಧ್ಯಕ್ಷ ಸುಕುಮಾರ್ ಕುದ್ರೆಪ್ಪಾಡಿ, ಕೃಷಿ ಅಧಿಕಾರಿ ನಫೀಸತ್ ಹಂಶೀನಾ, ಸಹಾಯಕ ಕೃಷಿ ಅಧಿಕಾರಿ ಎಂಜಿನಿಯರ್ ಡಿ.ಅನಂತುರಾಜ್ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ನೀತು ಶಿಜಿಮೋನ್ ಸ್ವಾಗತಿಸಿದರು. ಲೆಕ್ಕಾಧಿಕಾರಿ ಪಿ.ಕೃಷ್ಣಪ್ರಿಯ ವಂದಿಸಿದರು.



