ದುಬೈ: ಇರಾನ್‌ನ ಖಾರ್ಗ್ ದ್ವೀಪದಲ್ಲಿರುವ ತೈಲ ಘಟಕಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ, ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಇರಾನ್ ಶನಿವಾರ ದಾಳಿ ನಡೆಸಿದೆ.
ರಾಯಭಾರ ಕಚೇರಿ ಆವರಣದ ಹೆಲಿಪ್ಯಾಡ್‌ಗೆ ಇರಾನ್‌ನ ಕ್ಷಿಪಣಿ ಅಪ್ಪಳಿಸಿದೆ. ಆವರಣದಲ್ಲಿ ದಟ್ಟ ಹೊಗೆ, ಬೆಂಕಿ ಮೇಲೆದ್ದಿದೆ.
ಕೊಲ್ಲಿ ರಾಷ್ಟ್ರಗಳ ಮೇಲೂ ದಾಳಿ ಮುಂದುವರಿಸಿರುವ ಇರಾನ್, ಯುಎಇನ ಫುಜೈರಾ ಬಂದರಿನಲ್ಲಿರುವ ತೈಲ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದೆ. ಒಮಾನ್‌ನ ಸೊಹರ್ ಪ್ರದೇಶದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
'ಹೊರ್ಮುಜ್ ಜಲಸಂಧಿ ಮೂಲಕ ತೈಲ ನೌಕೆಗಳು ಸಾಗಲು ಅಡ್ಡಿಪಡಿಸಿದರೆ ಮುಂದಿನ ದಾಳಿ ಖಾರ್ಗ್ ದ್ವೀಪದ ತೈಲ ಘಟಕವನ್ನು ಗುರಿಯಾಗಿಸಿ ಇರುತ್ತದೆ' ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಇರಾನ್‌ನ ತೈಲ ರಫ್ತು ನಿರ್ವಹಿಸುವ ಪ್ರಮುಖ ಘಟಕ ಇದೇ ದೀಪದಲ್ಲಿದ್ದು, ಇರಾನ್ ಪ್ರತಿದಾಳಿಯನ್ನು ತೀವ್ರಗೊಳಿಸಿದೆ.
ಶುಕ್ರವಾರ ಅಮೆರಿಕ ಪಡೆ ಇದೇ ದ್ವೀಪದಲ್ಲಿದ್ದ ಇರಾನ್‌ನ ಮಿಲಿಟರಿ ನೆಲೆಯನ್ನು ಧ್ವಂಸಗೊಳಿಸಿತ್ತು.
ಯುದ್ಧನೌಕೆ ನಿಯೋಜನೆ: ಇರಾನ್ ವಿರುದ್ಧದ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿರುವ ಅಮೆರಿಕ, 2,500 ನೌಕಾಪಡೆ ಸಿಬ್ಬಂದಿ, ನೆಲ ಮತ್ತು ನೀರಿನಲ್ಲಿ ಕಾರ್ಯನಿರ್ವಹಿಸುವ ವಿಶೇಷ ಸಾಮರ್ಥ್ಯದ ಯುದ್ಧನೌಕೆ 'ಯುಎಸ್‌ಎಸ್ ಟ್ರಿಪೊಲಿ'ಯನ್ನು ಶನಿವಾರ ಪಶ್ಚಿಮ ಏಷ್ಯಾದಲ್ಲಿ ನಿಯೋಜಿಸಿದೆ.

