ಕಾಸರಗೋಡು: ಕಾಸರಗೋಡಿನ ಕೂಡ್ಲು ಪರಿಸರದ ಪಾಯಿಚ್ಚಾಲಿನ ಶ್ರೀಸ್ಕಂದ ಯಕ್ಷಗಾನ ಕೇಂದ್ರದ ನೇತೃತ್ವದಲ್ಲಿ ಶ್ರೀಸ್ಕಂದ ಒಡ್ಡೋಲಗ ಎಂಬ ವಿನೂತನ ಕಾರ್ಯಕ್ರಮ ಏ. 19 ರಂದು ಭಾನುವಾರ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಕಲಾವಿದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭೋಗ್ ಸಭಾಂಗಣದ ಕೂಡ್ಲು ಈಶ್ವರ ಶ್ಯಾನುಭೋಗ್ ವೇದಿಕೆಯಲ್ಲಿ ಜರಗಲಿದೆ. ಮಕ್ಕಳಲ್ಲಿನ ಯಕ್ಷಗಾನದ ಪ್ರತಿಭೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಆಯ್ದ ಐದು ತಂಡಗಳಿಂದ ದಿನ ಪೂರ್ತಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಬೆಳಗ್ಗೆ 9ಕ್ಕೆ ಶ್ರೀಸ್ಕಂದ ಒಡ್ಡೋಲಗವನ್ನು ಕೇಂದ್ರದ ಗುರುಗಳಾದ ರಂಜಿತ್ ಮಲ್ಲ ಅವರು ಉದ್ಘಾಟಿಸಲಿದ್ದಾರೆ. ಬಳಿಕ 9.30ಕ್ಕೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಸದಸ್ಯರಿಂದ ವೇದೋದ್ಧರಣ ಎಂಬ ಕಥಾಭಾಗ, 11 ರಿಂದ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ರಾಜ್ಯಮಟ್ಟದಲ್ಲಿ ಎ ಗ್ರೇಡ್ ಪಡೆದ ಕಲ್ಲಿಕೋಟೆ ಜಿಲ್ಲೆಯ ಪ್ರೊವಿಡೆನ್ಸ್ ಹೈಯರ್ ಸೆಕಂಡರಿ ಶಾಲೆಯ ಮಕ್ಕಳಿಂದ ಸುಧನ್ವಾರ್ಜುನ ಕಾಳಗ, 11,45 ರಿಂದ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದವರಿಂದ ನರಕಾಸುರ ಮೋಕ್ಷ, 1.30ರಿಂದ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ರಾಜ್ಯಮಟ್ಟದಲ್ಲಿ ಎ ಗ್ರೇಡ್ ಪಡೆದ ಕಣ್ಣೂರಿನ ಸೈಂಟ್ ತೇರೇಸಾಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕಂಡರಿ ಶಾಲೆಯ ಮಕ್ಕಳಿಂದ ತರಣಿಸೇನ ಕಾಳಗ, 2.15 ರಿಂದ ಪಾಯಿಚ್ಚಾಲು ಕೂಡ್ಲಿನ ಶ್ರೀಸ್ಕಂದ ಯಕ್ಷಗಾನ ಕೇಂದ್ರದವರಿಂದ ಮಹಿಷಮರ್ದಿನಿ ಎಂಬ ಕಥಾಭಾಗಗಳ ಪ್ರದರ್ಶನವಿದೆ.
ಸಂಜೆ ಜರಗುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಲಿದ್ದು, ಮಧೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾನುಪ್ರಕಾಶ್, ಶಿವಮಂಗಲ ಕ್ಷೇತ್ರದ ಪ್ರಧಾನ ಅರ್ಚಕ ನಾಗೇಂದ್ರ ಭಟ್, ಕೂಡ್ಲು ಶಾಲೆಯ ವ್ಯವಸ್ಥಾಪಕ ಕೆ.ಜಿ. ಶ್ಯಾನುಭೋಗ್, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿದೇವಸ್ಥಾನದ ಆಡಳಿತ ಮೊಕ್ತೇಸರ ವೇಣುಗೋಪಾಲ ಉಪಸ್ಥಿತರಿರುವರು.



