ಸುಮಾರು 20 ವರ್ಷಗಳು ಮತ್ತು ಮೂರು ತನಿಖಾ ಸಂಸ್ಥೆಯ ತನಿಖೆಗಳ ನಂತರ, 2006 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಭವಿಷ್ಯವು ಅನಿಶ್ಚಿತವಾಗಿಯೇ ಉಳಿದಿದೆ. 31 ಜನರ ಸಾವಿಗೆ ಕಾರಣವಾದ ಈ ಭಯೋತ್ಪಾದಕ ದಾಳಿಯಲ್ಲಿ ಶಿಕ್ಷೆ ಅನುಭವಿಸಲು ಯಾವುದೇ ಆರೋಪಿಗಳು ಉಳಿದಿಲ್ಲ. ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳಾದ ಮನೋಹರ್ ನರ್ವಾರಿಯಾ, ರಾಜೇಂದ್ರ ಚೌಧರಿ, ಧನ್ ಸಿಂಗ್ ಮತ್ತು ಲೋಕೇಶ್ ಶರ್ಮಾ ಅವರನ್ನು ಬಾಂಬೆ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.
2008 ರ ಪ್ರತ್ಯೇಕ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಏಳು ಆರೋಪಿಗಳನ್ನು ವಿಶೇಷ NIA ನ್ಯಾಯಾಲಯವು ಸಾಕಷ್ಟು ಸಾಕ್ಷ್ಯಗಳು ಇಲ್ಲ ಎಂದು ಹೇಳಿ ಖುಲಾಸೆಗೊಳಿಸಿದ ಒಂದು ವರ್ಷದೊಳಗೆ ಈ ತೀರ್ಪು ಬಂದಿದೆ.
2006 ರ ಪ್ರಕರಣವನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS), ನಂತರ CBI (ಕೇಂದ್ರ ತನಿಖಾ ದಳ) ಮತ್ತು ಅಂತಿಮವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸಿತು.
ಪ್ರಕರಣದ ಹಿನ್ನೆಲೆ:
2006 ಸೆಪ್ಟೆಂಬರ್ 8ರಂದು, ಮಹಾರಾಷ್ಟ್ರದ ನಾಸಿಕ್ ಬಳಿಯ ಮುಸ್ಲಿಂ ಬಹುಸಂಖ್ಯಾತ ಪಟ್ಟಣವಾದ ಮಾಲೆಗಾಂವ್‌ನಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಮಧ್ಯಾಹ್ನ 1.50 ರ ಸುಮಾರಿಗೆ ನಾಲ್ಕು ಬಾಂಬ್‌ಗಳು ಸ್ಫೋಟಗೊಂಡವು. ಒಂದು ಬಾಂಬ್ ಹಮೀದಿಯಾ ಮಸೀದಿ ಮತ್ತು ಬಡಾ ಕಬ್ರಸ್ತಾನ್‌ನ ಪ್ರವೇಶದ್ವಾರದಲ್ಲಿ ಇರಿಸಲಾಗಿತ್ತು, ಒಂದು ಬಾಂಬ್ ಅನ್ನು ಅದರ ಕಾಂಪೌಂಡ್‌ನೊಳಗಿನ ಪಾರ್ಕಿಂಗ್ ಸ್ಥಳದಲ್ಲಿ ಸೈಕಲ್‌ನಲ್ಲಿ ಇರಿಸಲಾಗಿತ್ತು. ಇನ್ನೊಂದು ಅದರ ಆವರಣದಲ್ಲಿರುವ ವಿದ್ಯುತ್ ಸರಬರಾಜು ಕೋಣೆಯ ಗೋಡೆಯ ಮೇಲೆ ಮತ್ತು ನಾಲ್ಕನೆಯದನ್ನು ಜನದಟ್ಟಣೆಯ ಸ್ಥಳವಾದ ಮುಶಾವರತ್ ಚೌಕ್‌ನಲ್ಲಿ ಸೈಕಲ್‌ನಲ್ಲಿ ಇರಿಸಲಾಗಿತ್ತು.
ಸ್ಫೋಟಗಳಲ್ಲಿ 31 ಜನರು ಸಾವಿಗೀಡಾಗಿದ್ದು 312 ಜನರು ಗಾಯಗೊಂಡರು. ಪೊಲೀಸರು ಆರಂಭಿಕ ತನಿಖೆಯನ್ನು ನಡೆಸಿದರು. 2006 ಅಕ್ಟೋಬರ್ ನಲ್ಲಿ ಈ ಪ್ರಕರಣವನ್ನು ಎಟಿಎಸ್‌ಗೆ ಹಸ್ತಾಂತರಿಸಿದರು.
ಎಟಿಎಸ್ ಮತ್ತು ಸಿಬಿಐ ತನಿಖೆ:
ಈ ಸ್ಫೋಟಗಳಲ್ಲಿ ನಿಷೇಧಿತ ಗುಂಪೊಂದಕ್ಕೆ ಸಂಬಂಧಿಸಿದ 13 ಮುಸ್ಲಿಂ ಪುರುಷರ ಕೈವಾಡ ಇದೆ ಎಂದು ಎಟಿಎಸ್ ಆರೋಪಿಸಿತ್ತು. ನೂರುಲ್ ಹುದಾ, ಶಬ್ಬೀರ್ ಮಸಿಯುಲ್ಲಾ, ರಯೀಸ್ ಮನ್ಸೂರಿ, ಸಲ್ಮಾನ್ ಫಾರ್ಸಿ, ಡಾ. ಫಾರೋಗ್ ಮಗ್ದುಮಿ, ಶೇಖ್ ಮುಹಮ್ಮದ್ ಅಲಿ, ಆಸಿಫ್ ಖಾನ್, ಮೊಹಮ್ಮದ್ ಜಾಹಿದ್ ಮತ್ತು ಅಬ್ರಾರ್ ಅಹ್ಮದ್ ಎಂಬ ಒಂಬತ್ತು ಮಂದಿಯನ್ನು ಎಟಿಎಸ್ ಬಂಧಿಸಿತ್ತು.
ಮಾಲೇಗಾಂವ್ ಸ್ಫೋಟಗಳಿಗೆ ವಾರಗಳ ಮೊದಲು 2006 ಜುಲೈ 11ರಂದು ಸಂಭವಿಸಿದ ಮುಂಬೈ ಸರಣಿ ರೈಲು ಸ್ಫೋಟಗಳಿಗೆ ಸಂಬಂಧಿಸಿದಂತೆ ಅಲಿ ಮತ್ತು ಆಸಿಫ್ ಅವರ ವಿರುದ್ಧ ಎಟಿಎಸ್ ಪ್ರಕರಣ ದಾಖಲಿಸಿತ್ತು. 2025 ಜುಲೈ 11ರ ರೈಲು ಸ್ಫೋಟ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಅಲಿ ಮತ್ತು ಆಸಿಫ್ ಇಬ್ಬರನ್ನೂ ಖುಲಾಸೆಗೊಳಿಸಿತು. ಬಲವಂತದ ತಪ್ಪೊಪ್ಪಿಗೆಗಳು ಮತ್ತು ತನಿಖಾ ಲೋಪಗಳನ್ನು ಉಲ್ಲೇಖಿಸಿದ ಕೋರ್ಟ್ ಕಸ್ಟಡಿ ಚಿತ್ರಹಿಂಸೆಯ ಮೂಲಕ ಸಾಕ್ಷ್ಯವನ್ನು ಪಡೆಯಲಾಗಿದೆ ಎಂದು ಹೇಳಿತ್ತು
ಮಾಲೇಗಾಂವ್ ಪ್ರಕರಣದಲ್ಲಿಯೂ ಸಹ, ಒಂಬತ್ತು ಜನರಲ್ಲಿ ಏಳು ಮಂದಿ ತಪ್ಪೊಪ್ಪಿಗೆಗಳನ್ನು ನೀಡಿದ್ದಾರೆ ಎಂದು ಎಟಿಎಸ್ ಹೇಳಿಕೊಂಡಿದೆ. 2006 ರ ಮೇ ತಿಂಗಳಲ್ಲಿ ಹುದಾ ಅವರ ವಿವಾಹದ ಸಂದರ್ಭದಲ್ಲಿ ಈ ಪಿತೂರಿಯನ್ನು ಯೋಜಿಸಲಾಗಿತ್ತು. ಮುಂಬೈನಲ್ಲಿ ಬಾಂಬ್‌ಗಳನ್ನು ಇಬ್ಬರು ಪಾಕಿಸ್ತಾನಿ ಪ್ರಜೆಗಳ ಸಹಾಯದಿಂದ ಇಡಲಾಗಿತ್ತು ಎಂದು ಎಟಿಎಸ್ ಆರೋಪಿಸಿತು, ಮತ್ತು ಅವರನ್ನು 'ವಾಂಟೆಡ್ ಆರೋಪಿಗಳು' ಎಂದು ಹೆಸರಿಸಲಾಯಿತು.
ಬಂಧಿತ ಒಂಬತ್ತು ಜನರು ಆರು ವರ್ಷಗಳ ಕಾಲ ಜೈಲಿನಲ್ಲಿದ್ದರು.
2007 ರಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು. ಕೇಂದ್ರ ಸಂಸ್ಥೆಯು ಸಹ, ಪಿತೂರಿಯ ಹಿಂದೆ ಅದೇ ಗುಂಪಿನ ಆರೋಪಿಗಳಿದ್ದಾರೆ ಎಂದು ವಾದಿಸಿತು.
NIA ತನಿಖೆ:
2007 ಮೇ 18 ರಂದು, ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಿ 2010 ರಲ್ಲಿ ಸ್ವಾಮಿ ಅಸೀಮಾನಂದ ಅವರನ್ನು ಬಂಧಿಸಿತು. ಹೈದರಾಬಾದ್ ಸ್ಫೋಟದಲ್ಲಿ ಮಾತ್ರವಲ್ಲದೆ ಅಂತಹ ಇತರ ದಾಳಿಗಳಲ್ಲಿಯೂ ಅವರು ಭಾಗಿಯಾಗಿದ್ದಾರೆ ಎಂದು ಅದು ಆರೋಪಿಸಿದೆ.
ಸಿಬಿಐ ಪ್ರಕಾರ, 2010 ರಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಅಸೀಮಾನಂದ ತಪ್ಪೊಪ್ಪಿಗೆಯಲ್ಲಿ ಸುನಿಲ್ ಜೋಶಿ ಮತ್ತು ಅವರ ಜನರು ಮಾಲೇಗಾಂವ್ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
2011 ರಲ್ಲಿ, ಕೇಂದ್ರ ಸರ್ಕಾರವು ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಗಳನ್ನು 2008 ರಲ್ಲಿ ರಚಿಸಲಾದ ಎನ್‌ಐಎಗೆ ವರ್ಗಾಯಿಸಲು ನಿರ್ಧರಿಸಿತು.
ಮಾಲೇಗಾಂವ್ ಸ್ಫೋಟ ಪ್ರಕರಣವು ಎನ್‌ಐಎಗೆ ಹಸ್ತಾಂತರಿಸಲಾದ ತನಿಖೆಗಳಲ್ಲಿ ಒಂದಾಗಿದೆ. ಸಂಸ್ಥೆ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಿತು. ಬಂಧಿತ ಒಂಬತ್ತು ಜನರು ಪ್ರಕರಣದಲ್ಲಿ ಭಾಗಿಯಾಗಿಲ್ಲ ಮತ್ತು ಅವರ ತಪ್ಪೊಪ್ಪಿಗೆಗಳನ್ನು ಒತ್ತಡದಲ್ಲಿ ಪಡೆಯಲಾಗಿದೆ ಎಂದು ಅದು ಕಂಡುಹಿಡಿದಿದೆ. 2011 ರಲ್ಲಿ ಅವರಿಗೆ ಜಾಮೀನು ನೀಡಲಾಯಿತು.
2013 ರಲ್ಲಿ, ಎನ್‌ಐಎ ಬೇರೆ ಗುಂಪಿನ ಜನರನ್ನು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿತು.
ಅವರಲ್ಲಿ ಬಾಂಬೆ ಹೈಕೋರ್ಟ್‌ನಿಂದ ಆರೋಪ ಮುಕ್ತರಾದ ನರ್ವಾರಿಯಾ, ಚೌಧರಿ, ಸಿಂಗ್ ಮತ್ತು ಶರ್ಮಾ ಸೇರಿದ್ದಾರೆ. ಆರೋಪಪಟ್ಟಿಯಲ್ಲಿ ಜೋಶಿ (ಇವರು 2007 ರಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು), ರಾಮ್‌ಜಿ ಕಲ್ಸಂಗ್ರ, ಸಂದೀಪ್ ಡಾಂಗೆ ಮತ್ತು ರಮೇಶ್ ಮಹಲ್ಕರ್ ಅವರ ಹೆಸರೂ ಇದೆ.
ಎಟಿಎಸ್ ಬಂಧಿಸಿದ್ದ ಒಂಬತ್ತು ಜನರನ್ನು ಬಿಡುಗಡೆ ಮಾಡುವುದನ್ನು ಬೆಂಬಲಿಸಿದ ಸಂಸ್ಥೆ ಅವರ ವಿರುದ್ಧದ ವಿಚಾರಣೆಯು "ನ್ಯಾಯಾಲಯದ ಸಮಯ ವ್ಯರ್ಥ" ಎಂದು ಹೇಳಿದೆ.
2016 ಎಪ್ರಿಲ್ 25ರಂದು, ಒಂಬತ್ತು ಜನರಲ್ಲಿ ಎಂಟು ಜನರನ್ನು ಬಿಡುಗಡೆ ಮಾಡಲಾಯಿತು. ಅವರಲ್ಲಿ ಒಬ್ಬರಾದ ಶಬ್ಬೀರ್ ಅರ್ಜಿ ವಿಚಾರಣೆಯ ಸಮಯದಲ್ಲಿ ಸಾವಿಗೀಡಾಗಿದ್ದರು.
ನಾಲ್ವರು ವ್ಯಕ್ತಿಗಳ ವಿರುದ್ಧ ಎನ್‌ಐಎ ತನಿಖೆ:
ಜೋಶಿ ಅವರ ಮೇಲ್ವಿಚಾರಣೆಯಲ್ಲಿ ನಾಲ್ವರು ವ್ಯಕ್ತಿಗಳು ಸ್ಫೋಟಗಳನ್ನು ನಡೆಸಿದ್ದಾರೆ, ಇಂದೋರ್‌ನಿಂದ ಮಾಲೆಗಾಂವ್‌ಗೆ ಬಾಂಬ್‌ಗಳನ್ನು ಸಾಗಿಸಿದ್ದಾರೆ ಎಂದು ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ಆರೋಪಿಸಿದೆ.
ನರ್ವಾರಿಯಾ ಮತ್ತು ಚೌಧರಿ ಮಾಲೆಗಾಂವ್‌ನಲ್ಲಿ ಎರಡು ಸೈಕಲ್‌ಗಳನ್ನು ಖರೀದಿಸಿದ್ದಾರೆ ಎಂದು ಅದು ಹೇಳಿದೆ. ಸಿಂಗ್ ಮತ್ತು ಚೌಧರಿ ಮಸೀದಿಯ ಆವರಣದಲ್ಲಿ ಎರಡು ಬಾಂಬ್‌ಗಳನ್ನು ಇರಿಸಿದ್ದಾರೆ , ಕಲ್ಸಂಗ್ರಾ ಮತ್ತು ನರ್ವಾರಿಯಾ ಇನ್ನೆರಡು ಬಾಂಬ್‌ಗಳನ್ನು ಇರಿಸಿದ್ದಾರೆ ಎಂದು ಹೇಳಲಾಗಿದೆ. ಮುಸ್ಲಿಂ ಬಹುಸಂಖ್ಯಾತ ಮಾಲೆಗಾಂವ್ ಅನ್ನು ಕೋಮು ಅಶಾಂತಿಯನ್ನು ಹುಟ್ಟುಹಾಕಲು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂದು ಎನ್‌ಐಎ ಆರೋಪಿಸಿದೆ.
2013 ರಲ್ಲಿ ಬಂಧಿಸಲ್ಪಟ್ಟ ನಾಲ್ವರು ವ್ಯಕ್ತಿಗಳು ವಿಚಾರಣೆ ಪ್ರಾರಂಭವಾಗುವವರೆಗೆ ಕಾಯುತ್ತಾ ಆರು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು.
ಅವರು ಬಾಂಬ್‌ಗಳನ್ನು ಇರಿಸುವುದನ್ನು ಅಥವಾ ಸೈಕಲ್‌ಗಳನ್ನು ಖರೀದಿಸುವುದನ್ನು ನೋಡಿದ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿ 2019 ಜೂನ್ 14 ರಂದು ಹೈಕೋರ್ಟ್ ಅವರಿಗೆ ಜಾಮೀನು ನೀಡಿತು. 2013 ರಲ್ಲಿ ಏಳು ವರ್ಷಗಳ ಅಂತರದ ನಂತರ, ಎನ್‌ಐಎ ತನಿಖೆಯ ಸಮಯದಲ್ಲಿ ಸೈಕಲ್ ಅಂಗಡಿ ಮಾಲೀಕರು ಅವರನ್ನು ಹೇಗೆ ಗುರುತಿಸಿದ್ದಾರೆ ಎಂದು ಹೈಕೋರ್ಟ್ ಪ್ರಶ್ನಿಸಿತು.
ಜಾಮೀನು ಪಡೆದ ನಂತರ ನಾಲ್ವರು ಆರೋಪಿಗಳು ವಿಶೇಷ ನ್ಯಾಯಾಲಯದಲ್ಲಿ ಬಿಡುಗಡೆ ಅರ್ಜಿಗಳನ್ನು ಸಲ್ಲಿಸಿದ್ದರು. ಆಮೇಲೆ ಅವುಗಳನ್ನು ಹಿಂತೆಗೆದುಕೊಳ್ಳಲಾಯಿತು. 2025 ಸೆಪ್ಟೆಂಬರ್ ನಲ್ಲಿ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಆರೋಪಗಳನ್ನು ರೂಪಿಸಿತು. ಹೈಕೋರ್ಟ್ ಮುಂದೆ ಆರೋಪಗಳನ್ನು ರದ್ದುಗೊಳಿಸಲು ನಾಲ್ವರು ಕೋರಿದರು. ಈ ಮೇಲ್ಮನವಿಯನ್ನು ಬುಧವಾರ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರಿದ್ದ ಪೀಠ ಪುರಸ್ಕರಿಸಿದೆ.

