ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನವಣೆಯ ಮೊದಲ ಹಂತದ ಮತದಾನದ ವೇಳೆ ಹಿಂಸಾಚಾರ ಸಂಭವಿಸಿದೆ ಹಾಗೂ ಮತದಾರರಿಗೆ ಬೆದರಿಕೆ ಒಡ್ಡಿರುವ ಆರೋಪಗಳು ಕೇಳಿಬಂದಿವೆ.
ಮುರ್ಶಿದಾಬಾದ್ ಜಿಲ್ಲೆಯ ನವೋಡ ಎಂಬಲ್ಲಿ ಬುಧವಾರ ರಾತ್ರಿ ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದ್ದು ಕನಿಷ್ಠ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
ರಾಜ್ಯದ ಮೊದಲ ಹಂತದ ಮತದಾನಕ್ಕೆ ಮುನ್ನ ನಡೆದ ಈ ಘಟನೆಯಿಂದ ಜನರು ಭೀತರಾಗಿದ್ದಾರೆ.
ನಮಾಝ್ ಮಾಡುವುದಕ್ಕಾಗಿ ಹೊರಗೆ ಹೋದಾಗ ಸ್ಫೋಟ ಸಂಭವಿಸಿದೆ ಎಂದು ಸಂತ್ರಸ್ತ ಹೇಳಿದ್ದಾರೆ. ''ಬುಧವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ನಮಾಝ್ ಮಾಡಲು ನಾನು ಹೊರಗೆ ಹೋಗಿದ್ದೆ. ನಾನು ನಿಂತಿದ್ದಾಗ ಇಬ್ಬರು ಹುಡುಗರು ಬಂದು ಬಾಂಬೊಂದನ್ನು ನನ್ನ ಪಾದದ ಸಮೀಪ ಎಸೆದರು. ಹುಮಾಯೂನ್ ಕಬೀರ್ ಪಕ್ಷದ ಕಾರ್ಯಕರ್ತರು ಇದನ್ನು ಮಾಡಿದ್ದಾರೆ'' ಎಂದು ಅವರು ಹೇಳಿದರು.
ಗಂಟೆಗಳ ಬಳಿಕ, ಮತದಾನ ಆರಂಭವಾದಾಗ ಮುರ್ಶಿದಾಬಾದ್‌ನಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಜನತಾ ಉನ್ನಯನ್ ಪಕ್ಷದ (ಎಜೆಯುಪಿ) ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತು. ಎಜೆಯುಪಿ ನಾಯಕ ಹುಮಾಯೂನ್ ಕಬೀರ್ ಬಂದಾಗ ಟಿಎಮ್‌ಸಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪೊಲೀಸರೊಂದಿಗೆ ಘರ್ಷಣೆಗಿಳಿದರು ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಉಭಯ ಪಕ್ಷಗಳ ಕಾರ್ಯಕರ್ತರು ಲಾಠಿಗಳಿಂದ ಪರಸ್ಪರರ ಮೇಲೆ ದಾಳಿ ನಡೆಸಿದರು, ಕಲ್ಲುಗಳನ್ನು ಎಸೆದರು ಮತ್ತು ರಸ್ತೆಯ ಬದಿಯಲ್ಲಿದ್ದ ವಾಹನಗಳಿಗೆ ಹಾನಿಗೈದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರಗೈದರು.
ಈ ನಡುವೆ, ಬುಧವಾರ ರಾತ್ರಿ ಓರ್ವ ಪೊಲೀಸ್ ಅಧಿಕಾರಿ ತನ್ನ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿ ಹುಮಾಯೂನ್ ಕಬೀರ್ ಧರಣಿ ನಡೆಸಿದರು. ಆ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ನವೋಡ ಘಟನೆಯ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗವು ಜಿಲ್ಲಾಧಿಕಾರಿಯಿಂದ ವರದಿಯೊಂದನ್ನು ಕೇಳಿದೆ.
ಅಸಾನ್‌ಸೋಲ್‌ನಲ್ಲಿ ಬಿಜೆಪಿಯ ಅಗ್ನಿಮಿತ್ರಾ ಪೌಲ್‌ರ ಕಾರಿಗೆ ಹಾನಿ ಮಾಡಲಾಗಿದೆ.
ಅಸಾನ್‌ಸೋಲ್‌ನಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದಿದ್ದು, ನನ್ನ ಕಾರಿನ ಮೇಲೆ ದೊಡ್ಡ ಕಲ್ಲೊಂದನ್ನು ಎಸೆಯಲಾಗಿದೆ ಎಂದು ಅಗ್ನಿಮಿತ್ರಾ ಪೌಲ್ ಹೇಳಿದರು.
ಇನ್ನೊಂದು ಘಟನೆಯಲ್ಲಿ, ಕುಮಾರಗಂಜ್‌ನ ಬಿಜೆಪಿ ಅಭ್ಯರ್ಥಿ ಸುಭೇಂದು ಸರ್ಕಾರ್ ಮೇಲೆ ಟಿಎಮ್‌ಸಿ ಕಾರ್ಯಕರ್ತರು ದಕ್ಷಿಣ್ ದೀನಜ್‌ಪುರ್‌ನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರ್‌ರನ್ನು ಕೆಲವರು ಅಟ್ಟಿಸಿಕೊಂಡು ಹೋಗುವುದು ಹಾಗೂ ಪೊಲೀಸರು ಅವರನ್ನು ರಕ್ಷಿಸುವುದು ವೀಡಿಯೊವೊಂದರಲ್ಲಿ ಕಾಣುತ್ತದೆ.
ಇವಿಎಮ್ ದೋಷಗಳು:
ಮುರ್ಶಿದಾಬಾದ್‌ನಲ್ಲಿ, ಇವಿಎಮ್ ದೋಷಗಳಿಂದಾಗಿಯೂ ಮತದಾನಕ್ಕೆ ಅಡಚಣೆಯುಂಟಾಗಿತ್ತು. ಬೆಲ್ದಂಗ ವಿಧಾನಸಭಾ ಕ್ಷೇತ್ರದ ಪರ್ಸಲಿಕ ಮದನ್‌ಮೋಹನ್ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 156ರಲ್ಲಿ, ಇಲೆಕ್ಟ್ರಾನಿಕ್ ಮತದಾನ ಯಂತ್ರದಲ್ಲಿ ದೋಷ ಕಾಣಿಸಿಕೊಂಡಾಗ ಮತದಾನ ಸ್ಥಗಿತಗೊಂಡಿತು ಎಂದು ಅಧಿಕಾರಿಗಳು ತಿಳಿಸಿದರು.
ಸಂಶೇರ್‌ಗಂಜ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 212ರಲ್ಲಿ ಇವಿಎಮ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಮತದಾನ ಆರಂಭಗೊಳ್ಳಲಿಲ್ಲ. ಕಾಂಡಿ ಕ್ಷೇತ್ರದ ಮತಗಟ್ಟೆ ಸಂಖ್ಯೆ 130ರಲ್ಲಿಯೂ ಮತದಾನ ವಿಳಂಬವಾಯಿತು.
ಇದರ ನಡುವೆಯೇ, ಜಾರ್ಗ್ರಾಮ್ ಜಿಲ್ಲೆಯ ಜಿತುಶೋಲ್ ಆಂಶಿಕ್ ಬುನಿಯಾದಿ ವಿದ್ಯಾಲಯ ಮತಗಟ್ಟೆಯ ಹೊರಗೆ ಆನೆಯೊಂದು ಕಾಣಿಸಿಕೊಂಡು ಭೀತಿ ಹುಟ್ಟಿಸಿತು.
ನಂದಿಗ್ರಾಮದಲ್ಲಿ ಮತದಾರರಿಗೆ ಬೆದರಿಕೆ?
ನಂದಿಗ್ರಾಮದಲ್ಲಿ ಪೊಲೀಸರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಟಿಎಮ್‌ಸಿ ಆರೋಪಿಸಿದೆ. ಅದೇ ವೇಳೆ, ತೃಣಮೂಲ ಪಕ್ಷದ ಬೆಂಬಲಿತ ಗೂಂಡಾಗಳು ಈ ಪ್ರದೇಶದಲ್ಲಿ ಜನರನ್ನು ಬೆದರಿಸುತ್ತಿದ್ದಾರೆ ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಸಚಿವೆ ಶಶಿ ಪಾಂಜಾ, ಪೂರ್ಬ ಮದೀನಾಪುರ ಜಿಲ್ಲೆಯ ನಂದಿಗ್ರಾಮದಲ್ಲಿ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಆರೋಪವನ್ನು ತಿರಸ್ಕರಿಸಿದ ಸುವೇಂದು ಅಧಿಕಾರಿ, ಟಿಎಮ್‌ಸಿ ಪೋಷಿತ ಗೂಂಡಾಗಳು ಮತದಾರರನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದರು.

