HEALTH TIPS

ಜಿಲ್ಲೆಯ ಹೆಮ್ಮೆಯ ಉತ್ಪನ್ನವೆಂದು ಘೋಷಿಸಿ ಸಂದ 4 ವರ್ಷಗಳು: ಹಲಸಿಗೆ ಸಲ್ಲದ ಮಾನ-ಘೋಷಣೆಗಷ್ಟೇ ಸೀಮಿತವೇ?

 ಬದಿಯಡ್ಕ: ಕೇಂದ್ರ ಸರ್ಕಾರದ "ಒಂದು ಜಿಲ್ಲೆ, ಒಂದು ಉತ್ಪನ್ನ" ಯೋಜನೆಯಲ್ಲಿ ಹಲಸನ್ನು ಕಾಸರಗೋಡಿನ ಹೆಮ್ಮೆಯ ಉತ್ಪನ್ನವಾಗಿ ಆಯ್ಕೆ ಮಾಡಿ ನಾಲ್ಕು ವರ್ಷಗಳಾಗಿವೆ. ಆದರೆ ಈ ಕ್ರಮ ಘೋಷಣೆಗೆ ಮಾತ್ರ ಸೀಮಿತವಾಗಿದೆಯೆ ಹೊರತು ಬೇರೆ ಯಾವುದೇ ಕ್ರಮಗಳು ಕಂಡುಬಂದಿಲ್ಲ. ಈ ಹಿಂದೆ ಕಲ್ಲುಮ್ಮಕ್ಕಯ ಎಂಬ ಪ್ರಬೇಧದ ಮೀನು ಕಾಸರಗೋಡಿಗೆ ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ, ಜಿಲ್ಲೆಯ ಎಲ್ಲೆಡೆ ಸುಲಭವಾಗಿ ಲಭ್ಯವಿರುವ ಹಲಸನ್ನು ಜಿಲ್ಲೆಯ ಅತ್ಯಂತ ಸಣ್ಣ ಪ್ರದೇಶದಲ್ಲಿ ಮಾತ್ರ ಕಂಡುಬರುವ ಕಲ್ಲುಮ್ಮಕ್ಕಯಕ್ಕಿಂತ ಹೆಚ್ಚಿನ ಆದಾಯದ ಸಾಮಥ್ರ್ಯವನ್ನು ಹೊಂದಿರುವುದರಿಂದ ಜಿಲ್ಲಾ ಕೈಗಾರಿಕಾ ಕೇಂದ್ರವು ಅರ್ಜಿಯನ್ನು ಸಲ್ಲಿಸಿತ್ತು.ಬಳಿಕ ಕೇಂದ್ರ ಸರ್ಕಾರವು 2022 ರಲ್ಲಿ ಹಲಸನ್ನು ಜಿಲ್ಲೆಯ ಉತ್ಪನ್ನವಾಗಿ ಆಯ್ಕೆ ಮಾಡಿತು. 


ಹಲಸಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದಾಗಿದ್ದರೂ ಕಳೆದ ವರ್ಷ ಅವುಗಳನ್ನು ಮಾರಾಟ ಮಾಡಲು ವ್ಯವಸ್ಥೆಗಳಿಲ್ಲದೆ ಅನೇಕರು ವ್ಯರ್ಥವಾಗಿ ಎಸೆದವರೇ ಹೆಚ್ಚು.  ದಕ್ಷಿಣ ಕೇರಳದಿಂದಲೂ ಜನರು ಹಲಸಿನ ಹಣ್ಣನ್ನು ಸೀಸನ್‍ನಲ್ಲಿ ಖರೀದಿಸಲು ಕಾಸರಗೋಡು ಜಿಲ್ಲೆಗೆ ಬರುತ್ತಿದ್ದರು. ಆದರೆ ಕಳೆದ ವರ್ಷ ಅದು ಕಂಡುಬಂದಿಲ್ಲ. ಕೆಲವಡೆ ಮನೆಮಂದಿ ಅವುಗಳನ್ನು ಕೊಯ್ಲುಮಾಡಿ ಮನೆಪಕ್ಕದ ಬೀದಿಗಳಲ್ಲಿ ಮಾರಾಟಕ್ಕೆ ಇಟ್ಟರೂ ಬೆಲೆ ನಗಣ್ಯ, ಬೇಡಿಕೆಯೂ ಹೆಚ್ಚಿರಲಿಲ್ಲ.


ಸ್ಥಳೀಯಾಡಳಿತ ಸಂಸ್ಥೆಗಳ ಅಡಿಯಲ್ಲಿ ಹಲಸಿನ ಹಣ್ಣು ಉತ್ಪನ್ನಗಳ ವಿವಿಧ ಭಕ್ಷ್ಯಗಳ ಹಲಸಿನ ಉತ್ಸವ ಆಯೋಜಿಸುವುದು ಕೇವಲ ಹೆಸರಿಗಷ್ಟೇ ಸೀಮಿತಿವಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರವೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಚಾರ ಹೊರತುಪಡಿಸಿ ಹಲಸಿನ ಹಣ್ಣನ್ನು ರಕ್ಷಿಸಲು ಮತ್ತು ಸಂಗ್ರಹಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬ ಆರೋಪವೂ ಇದೆ. ಹಲಸಿನ ಕಾಯಿ ಪುಡಿ, ಹಲಸಿನ ಚಿಪ್ಸ್, ಹಲಸಿನ ಐಸ್ ಕ್ರೀಮ್, ಹಲಸಿನ ಜಾಮ್ ನಂತಹ ಅನೇಕ ಮೌಲ್ಯವರ್ಧಿತ ಉತ್ಪನ್ನಗಳನ್ನು ಹಲಸಿನಿಂದ ತಯಾರಿಸಲು ಸಾಧ್ಯವಿದೆ. ಇದನ್ನು ಸಂಗ್ರಹಿಸಿ ಮಾರುಕಟ್ಟೆಗೆ ತರಬಹುದಾಗಿದ್ದರೆ, ಅದು ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಸಹಾಯಕರವಾಗುತ್ತಿತ್ತು. ಮುಖ್ಯವಾಗಿ ಆಡಳಿತ ಯಂತ್ರಗಳು ಯೋಜನೆಗಳ  ಪ್ರಚಾರಕ್ಕಷ್ಟೇ ಮುಂದಾಗುತ್ತಿದ್ದು, ಬಳಿಕದ ಆಸಕ್ತರಿಗೆ ತರಬೇತಿ, ಯಂತ್ರಗಳ ವ್ಯವಸ್ಥೆ, ಘಟಕಗಳ ನಿರ್ಮಾಣ, ಮಾರುಕಟ್ಟೆ ಮೊದಲಾದವುಗಳತ್ತ ಕ್ರಿಯಾತ್ಮಕವಾಗಿ ಮುಂದುವರಿಯದಿರುವುದು ಈ ಹಿನ್ನಡೆಗೆ ಮುಖ್ಯ ಕಾರಣವಾಗಿದೆ. 

2018 ರಲ್ಲಿ, ರಾಜ್ಯ ಸರ್ಕಾರವೇ ಹಲಸನ್ನು ರಾಜ್ಯದ ಅಧಿಕೃತ ಹಣ್ಣಾಗಿ ಘೋಷಿಸಿತ್ತು. ಈ ಘೋಷಣೆಯು "ಕೇರಳ ಹಲಸಿನ ಹಣ್ಣು" ಬ್ರಾಂಡ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಮುನ್ನವಾಗಿತ್ತು. ಹಲಸಿನ ಉತ್ಪಾದನೆ ಮತ್ತು ವಿತರಣೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದ್ದರೂ, ಮುಂದಿನ ಕ್ರಮಗಳು ಇಲ್ಲಿಯೂ ಪರಿಣಾಮಕಾರಿಯಾಗದೆ ಘೋಷಣೆ, ಕಡತಗಳಿಗಷ್ಟೇ ಸೀಮಿತವಾಗಿತ್ತು. 


ಅಭಿಮತ:

- ಹಿಂದೆ ಸರ್ಕಾರ ಯಾರದ್ದೋ ಮಾತು ಕೇಳಿ ಒಮ್ಮೆಗೆ ಈ ಘೋಷಣೆ ಮಾಡಿ ಬಳಿಕ ಯಾವುದೇ ಮುಂದುವರಿದ ಕ್ರಮ ಅನುಸರಿಸಿದಂತಿಲ್ಲ. ಕಾಸರಗೋಡು ಜಿಲ್ಲೆಯಾದ್ಯಂತ ಹಲಸು ಧಾರಾಳವಾಗಿದ್ದು, ಬಳಕೆಯ ಮಹತ್ವವಾಗಲಿ, ಉತ್ಪನ್ನಗಳ ತಯಾರಿ ವ್ಯವಸ್ಥೆಯಾಗಲಿ ಸ್ಪಷ್ಟತೆ ಇಲ್ಲದೆ ಎಲ್ಲೆಡೆ ವ್ಯರ್ಥವಾಗುತ್ತಿದೆ. ಯುವಜನರ ಸ್ವ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿದ್ದು, ಸರ್ಕಾರ ನಿಶ್ಚಿತ ನಿಧಿ ಇದಕ್ಕಾಗಿ ಮೀಸಲಿಟ್ಟರೆ ಏನಾದರೂ ಮಾಡಲು ಸಾಧ್ಯವಿದೆ. ಸರ್ಕಾರ, ಕೃಷಿ ವಿಜ್ಞಾನ ಕೇಂದ್ರಗಳು ಕೇವಲ ಒಮ್ಮೆಗೆ ಪ್ರಚಾರದ ಉದ್ದೇಶಕ್ಕೆ ಇಂತಹ ವಿಷಯಗಳನ್ನು ತಾರದೆ ಸೂಕ್ತ ಮುಂದಾಲೋಚನೆಯೊಂದಿಗೆ ಬಂದರೆ ಗ್ರಾ.ಪಂ.ಮೂಲಕ ವ್ಯವಸ್ಥಿತ ಅನುಷ್ಠಾನಕ್ಕೆ ಖಂಡಿತಾ ಕೈಜೋಡಿಸಲಾಗುವುದು.

ಡಿ.ಶಂಕರ.

ಅಧ್ಯಕ್ಷರು. ಬದಿಯಡ್ಕ ಗ್ರಾಮ ಪಂಚಾಯಿತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries